ಜಿಲ್ಲೆ

ಜೋಳ ಖರೀದಿ ಮಿತಿ ಹೆಚ್ಚಿಸಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಜಿಲ್ಲೆಯ ಹಿಂಗಾರಿನಲ್ಲಿ ಬೆಳೆದ ಜೋಳವನ್ನು ಸರ್ಕಾರ ಬೆಂಬಲ ಬೆಲೆಯಡಿ ಖರೀದಿ ಕೇಂದ್ರದಲ್ಲಿ ನಿಗದಿಪಡಿಸಿರುವ ಮಿತಿಯನ್ನು ಹೆಚ್ಚಿಸಲು ಆಗ್ರಹಿಸಿ ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಗುರುವಾರ ಪ್ರತಿಭಟನೆ ನಡೆಯಿತು.

ರಾಜ್ಯ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಆರ್.ಮಾಧವ ರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರ ಜಿಲ್ಲೆಗೆ ಕೇವಲ ಶೇ.4%ರಷ್ಟು ಬಿತ್ತನೆಯಾಗಿದೆ ಎನ್ನುವ ಆಧಾರದ ಮೇಲೆ 40 ಸಾವಿರ ಕ್ವಿಂಟಲ್ ನಿಗದಿಪಡಿಸಿದ್ದರಿಂದ ರೈತರಿಗೆ ಅನುಕೂಲವಾಗದೆ ಇರುವುದರಿಂದ ಆಂತಕಪಡಿಸಿದೆ ಎಂದರು.

ಹಿಂಗಾರಿನಲ್ಲಿ (4ತಿಂಗಳ ಹಿಂದೆ)ಕಟಾವು ಮಾಡಿದ ಜೋಳವು ರಾಜ್ಯ ಸರ್ಕಾರ ಘೋಷಿಸುವ ಬೆಂಬಲ ಬೆಲೆಗಾಗಿ ಕಾದು ರೈತರು ಹೈರಾಣಾಗಿದ್ದಾರೆ. ನಾಲ್ಕು ತಿಂಗಳ ಹಿಂದೆ ಮಾರಾಟಕ್ಕೆ ಸಿದ್ಧಪಡಿಸಿದ ಜೋಳಕ್ಕೆ ಹುಳಗಳು ಬೀಳುವ ಆತಂಕ ಎದುರಾಗಿದೆ. ಸರಿಯಾದ ಸಮಯಕ್ಕೆ ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರಗಳನ್ನು ತೆರೆಯದೆ ಇರುವುದರಿಂದ ರೈತರಿಗೆ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ಹಿಂಗಾರು ಹಂಗಾಮಿನಲ್ಲಿನ ಜೋಳವನ್ನು ಖರೀದಿಸಲು ಆದೇಶ ಮಾಡಿರುವುದು ಬೆರಳಣಿಕೆಯಷ್ಟು ರೈತರಿಗೆ ಮಾತ್ರ ಪ್ರಯೋಜನ ದೊರಕಿರುತ್ತದೆ. ಉಳಿದ ರೈತರು ಖರೀದಿ ಕೇಂದ್ರದಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದ ಜೋಳ ನೋಂದಣಿ ಮಾಡಿಸಲು ರಾತ್ರಿಯಿಡಿ ಖರೀದಿ ಕೇಂದ್ರಗಳ ಮುಂದೆ ಮಹಿಳೆಯರು ಮಕ್ಕಳನ್ನು ಕಟ್ಟಿಕೊಂಡು ನೋಂದಣಿ ಮಾಡಿಸುವ ಮುಗಿ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಶೀಘ್ರದಲ್ಲೆ ಸಂಬಂಧಿಸಿದ ಇಲಾಖೆ ಸಚಿವರು ಜಿಲ್ಲೆಯಲ್ಲಿ ಮಾರಾಟಕ್ಕೆ ಲಭ್ಯವಿರುವ 10 ಲಕ್ಷ ಕ್ವಿಂಟಲ್ ಜೋಳ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲು ಆದೇಶ ಹೊರಡಿಸಬೇಕು. ಈಗಾಗಲೇ ಜೋಳ ಮಾರಾಟಕ್ಕೆ ನೊಂದಾಯಿಸಿಕೊಂಡ ರೈತರಿಂದ ಜೋಳ ಮಾರಾಟಕ್ಕೆ ಬೇಕಾದ ಗೋಣಿಚೀಲ ಸೇರಿದಂತೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಇಲ್ಲಿನ ನಾರಾಯಣ ರಾವ್ ಪಾರ್ಕ್‌ನಿಂದ ಡಿಸಿ ಕಚೇರಿಯವರೆಗೆ ಜಿಲ್ಲೆಯ ನೂರಾರು ಜೋಳ ಬೆಳೆದ ರೈತರು ಮೆರವಣಿಗೆ ನಡೆಸಿ ಡಿಸಿಗೆ ಮನವಿ ಸಲ್ಲಿಸಿದರು.

---