ಜಿಲ್ಲೆ

ಅಕ್ರಮ ಗಣಿಗಾರಿಕೆ, ರೆಡ್ಡಿಗೆ ಅಪತ್ತು ಭೀತಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಒಎಂಸಿ ಕಂಪನಿಯು ರಾಜ್ಯ ಹಾಗೂ ಆಂಧ್ರದ ನಡುವಿನ ಗಡಿ ನಾಶ ಹಾಗೂ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಆರೋಪದ ವರದಿ ಸಲ್ಲಿಸುವಂತೆ ನಿ.ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ಕೋರ್ಟ್ ಆದೇಶ ಬೆನ್ನಲ್ಲೇ ಹಾಲಿ ಶಾಸಕ ಜಿ.ಜನಾರ್ದನರೆಡ್ಡಿಗೆ ಅಪತ್ತು ಭೀತಿ ಎದುರಾಗಿದೆ.

ಆಂಧ್ರದ ರಾಯದುರ್ಗ ತಾಲೂಕಿನ ಮಲಪನಗುಡಿ ಅಂತರಗಂಗಮ್ಮ ಕೊಂಡದಲ್ಲಿ 68.50 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಶಾಸಕ ಜಿ.ಜನಾರ್ದನರೆಡ್ಡಿ ಒಡೆತನದ ಒಎಂಸಿ ಕಂಪನಿಯು ರಾಜ್ಯ ಮತ್ತು ಆಂಧ್ರ ಪ್ರದೇಶದ ನಡುವಿನ ಅಂತರಾಜ್ಯ ಗಡಿ ನಾಶಪಡಿಸಿದೆ. ಬಳ್ಳಾರಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ 28.90 ಲಕ್ಷ ಟನ್ ಅದಿರನ್ನು ಹೊರತೆಗೆದು ಅಕ್ರಮವಾಗಿ ಸಾಗಿಸಿದೆ ಎಂಬುದು ಸಾಬೀತುಗೊಂಡು ಸಿಬಿಐ ವಿಚಾರಣಾಧೀನ ನ್ಯಾಯಾಲಯ ರೆಡ್ಡಿಗೆ ಶಿಕ್ಷೆ ಪ್ರಕಟಿಸಿತ್ತು. ಹೈಕೋರ್ಟ್ ಮೂಲಕ ಕೇಸ್ ತಡೆ ತಂದು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಆದರೆ, ಅಮಿಕ್ಯೂಸ್ ಕ್ಯೂರಿ ಹಾಗೂ ಆಂಧ್ರದ ಸಮ್ಮಿರೆಡ್ಡಿ ಸಮಿತಿ ನೀಡಿದ ವರದಿ ಅನ್ವಯ ಸುಪ್ರೀಂ ಕೋರ್ಟ್ ನಿ. ನ್ಯಾಯಾಧೀಶ ಸುಧಾಂಶ ಧುಲಿಯಾ ನೇತೃತ್ವದ ಐವರ ಸದಸ್ಯರ ಸಮಿತಿ ರಚಿಸಿ ಮೂರು ತಿಂಗಳೊಳೆಗೆ ವರದಿ ಸಲ್ಲಿಸಲು ಸೂಚಿಸಿ, ಮುಂದಿನ ವಿಚಾರಣೆ ಜನವರಿಗೆ ಮುಂದೂಡಲಾಗಿದೆ. ಐವರ ಸಮಿತಿ ಸದಸ್ಯರಲ್ಲಿ ನಿ.ನ್ಯಾಯಾಧೀಶರು, ಕೇಂದ್ರ ನಿವಾರಣಾ ಸಮಿತಿ ಸದಸ್ಯ, ಆಂಧ್ರಪ್ರದೇಶದ ಕೈಗಾರಿಕೆ ಮತ್ತು ಗಣಿಗಾರಿಕೆ ಇಲಾಖೆಯ ಕಾರ್ಯದರ್ಶಿ, ಆಂಧ್ರದ ಪರಿಸರ ಮತ್ತು ಅರಣ್ಯ, ಆಂಧ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಸೇರಿ ಐವರನ್ನು ನೇಮಿಸಿ ತನಿಖೆಗೆ ಆದೇಶಿಸಿದೆ.

ಅಕ್ರಮ ಅದಿರು ಸಾಗಣೆ ವಸೂಲಿ : ಅಕ್ರಮವಾಗಿ 884 ಕೋಟಿ ರೂ. ಮೌಲ್ಯದ 29 ಲಕ್ಷ ಟನ್ ಅದಿರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಜಿ.ಜನಾರ್ದನರೆಡ್ಡಿ ನೇತೃತ್ವದ ಒಎಂಸಿ ಮತ್ತು ಸಹಚರರ ಕಂಪನಿಗಳಿಂದ ವಸೂಲಿಗೆ ಗಣಿ ಉದ್ಯಮಿ ಟಪಾಲ್ ಗಣೇಶ್ ಆಗ್ರಹಿಸಿದ್ದರು. ಜತೆಗೆ ಕೇಂದ್ರದ ಉನ್ನತಾಧಿಕಾರ ಸಮಿತಿ (ಸಿಇಸಿ), ಲೋಕಾಯುಕ್ತ ಹಾಗೂ ಹೈದರಬಾದ್‌ನ ಸಿಬಿಐ ನ್ಯಾಯಾಲಯ ನೀಡಿದ ತೀರ್ಪಿನ ಪ್ರತಿಯನ್ನು ಪೂರಕವಾಗಿ ಲಗತ್ತಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈಗಾಗಲೇ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿರುವ ಟಪಾಲ್ ಗಣೇಶ್ ಅಕ್ರಮ ಅದಿರು ಸಾಗಣೆ ದಾಖಲೆಗಳು ಒದಗಿಸಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರ ರೆಡ್ಡಿ ವಿರುದ್ಧ ಅಕ್ರಮ ಅದಿರು ಸಾಗಣೆ ಹಿನ್ನೆಲೆ 884 ಕೋಟಿ ರೂ. ಬಡ್ಡಿ ಸಮೇತ ಸೇರಿ 12,500 ಕೋಟಿ ರೂ. ವಸೂಲಿಗೆ ಮುಂದಾಗಲಿದೆ ಎಂದು ಮೂಲಗಳು ತಿಳಿಸಿದವು.

ಹೊಸ ವರ್ಷಕ್ಕೆ ರೆಡ್ಡಿಗೆ ಹಿನ್ನೆಡೆ ? : ಒಎಂಸಿ ಕಂಪನಿಯ ಅಕ್ರಮ ವಿಸ್ತರಣೆ ಬಗ್ಗೆ ಸುಪ್ರಿಂ ಕೋರ್ಟ್ ಮೂರು ತಿಂಗಳೊಗೆ ವರದಿ ನೀಡುವಂತೆ ಸೂಚಿಸಿದೆ. ಅಲ್ಲದೆ, ಆಂಧ್ರಪ್ರದೇಶ ಸರ್ಕಾರ ರೆಡ್ಡಿ ಒಡೆತನದ ನಾಲ್ಕು ಗಣಿ ಗುತ್ತಿಗೆಗಳನ್ನು ಶಿಫಾರಸು ಮಾಡಿದ್ದು ಗುತ್ತಿಗೆ ರದ್ದುವಾಗುವ ಭೀತಿಯಿದೆ. ಇತ್ತ ರಾಜ್ಯ ಸರ್ಕಾರ ರಾಜ್ಯದ ಅಕ್ರಮ ಅದಿರು ಸಾಗಣೆ ಸಂಬಂಧ ಲೋಕಾಯುಕ್ತ ಸಂಸ್ಥೆ ವಿಚಾರಣೆ ನಡೆಸಿದೆ. ಅದರ, ಸಂಪೂರ್ಣ ದಾಖಲೆಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದು ವಿಚಾರಿಸಲು ಆದೇಶಿಸಿದೆ. ಈ ಎಲ್ಲವೂ ಇನ್ನೂ ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಂಡರೆ ಹೊಸ ವರ್ಷಕ್ಕೆ ಶಾಸಕ ಜಿ.ಜನಾರ್ದನರೆಡ್ಡಿ ಹಿನ್ನೆಡೆಯಾಗಲಿದೆ ಎಂಬುದು ಅಭಿಪ್ರಾಯವಾಗಿದೆ.

ಕೋಟ್... ರಾಜ್ಯ ಸಂಪತ್ತು ಲೂಟಿಯಾಗಿದೆ. ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಅಧಿಕಾರಿಗಳು ಸಹಕರಿಸಿರುವುದು ದುರ್ದೈವ. ರಾಜ್ಯ ಸರ್ಕಾರ ನಿಪಕ್ಷಪಾತವಾಗಿ ತನಿಖೆ ನಡೆಸಿ ಪ್ರತಿಯೊಬ್ಬರನ್ನು ಶಿಕ್ಷೆಗೆ ಒಳಪಡಿಸಬೇಕು.

- ಟಪಾಲ್ ಗಣೇಶ್, ಗಣಿ ಉದ್ಯಮಿ.