ಜಿಲ್ಲೆ

ಅಸಮತೋಲನ ಹೆಚ್ಚಿದರೆ ಅಭಿವೃದ್ಧಿ ಹಿನ್ನಡೆ

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ಡಾ.ಡಿ.ಎಂ.ನಂಜುಂಡಪ್ಪ ವರದಿ ಅನುಷ್ಠಾನದಿಂದ ಹೇಗೆ ಅಭಿವೃದ್ದಿಯಾಗಿದೆ ಎಂಬುದು ಸೂಚ್ಯಂಕದ ಅಧಾರದಲ್ಲಿ ತಿಳಿಯಲಾಗುವುದು. ಅಸಮತೋಲನ ಹೆಚ್ಚಾದಾಗ ಪ್ರದೇಶಗಳು ಹಿಂದುಳಿಯಲಿವೆ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೊ.ಎಂ.ಗೋವಿಂದರಾವ್ ಹೇಳಿದರು.

ಇಲ್ಲಿನ ಡಿಸಿ ಕಚೇರಿಯಲ್ಲಿ ಜಿಲ್ಲಾಮಟ್ಟದ ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಹಿಂದುಳಿದಿದ್ದಲ್ಲಿ ಯಾವ ಕಾರಣಕ್ಕಾಗಿ ಯಾವ ಕ್ಷೇತ್ರದಲ್ಲಿ ಹಿಂದೆ ಉಳಿದಿದೆ ಎಂಬುದನ್ನು ಸಮಿತಿಯು ಪರಾಮರ್ಶಿಸಲಿದೆ. ತಲಾ ಆದಾಯ, ಶಿಕ್ಷಣ, ಆರೋಗ್ಯ ಇನ್ನಿತರ ಕ್ಷೇತ್ರಗಳಲ್ಲಿನ ಸುಧಾರಣೆ, ಬೆಳವಣಿಗೆಯ ಬಗ್ಗೆಯು ಸಮಿತಿಯು ಪರಿಶೀಲಿಸಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಯಾವ ರೀತಿಯ ಬೆಳವಣಿಗೆ ಬದಲಾವಣೆಯಾಗಿದೆ, ಇನ್ನೂ ಏನೇನು ಅಭಿವೃದ್ಧಿಯಾಗಬೇಕಿದೆ ಎಂಬುದನ್ನು ಗುರುತಿಸಿ ಜಿಲ್ಲೆಯಲ್ಲಿ ವಿವಿಧ ವಲಯಗಳ ಸೂಚ್ಯಂಕ ಆಧರಿಸಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪರಾಮರ್ಶಿಸಿ ಸರ್ಕಾರಕ್ಕೆ ವರದಿ ನೀಡಲಾಗುವುದು.

ಡಾ.ಡಿ.ಎಂ.ನಂಜುಂಡಪ್ಪ ಅವರ 2002ರ ವರದಿಯಲ್ಲಿ ಅಂದಿನ 176 ತಾಲೂಕುಗಳನ್ನು ಹಿಂದುಳಿದ, ಅತಿ ಹಿಂದುಳಿದ, ಅತ್ಯಂತ ಹಿಂದುಳಿದ ಹಾಗೂ ಅಭಿವೃದ್ದಿ ಹೊಂದಿದ ತಾಲೂಕುಗಳೆಂದು 4 ವರ್ಗದಲ್ಲಿ ವರ್ಗೀಕರಿಸಿ ಅದಕ್ಕೆನುಗುಣವಾಗಿ ಅನುದಾನ ಹಂಚಿಕೆಗೆ ಶಿಫಾರಸ್ಸು ಮಾಡಿದ್ದರು. ಇದರನ್ವಯ ಗುರುತಿಸಲಾದ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಸರ್ಕಾರ 31 ಸಾವಿರ ಕೋಟಿ ರೂ. ವೆಚ್ಚ ಮಾಡಿದೆ ಎಂದರು.

ರಾಜ್ಯ ಸರ್ಕಾರ 2024 ಸೆಪ್ಟಂಬರ್‌ನಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಆರ್ಥಿಕ ತಜ್ಞರನ್ನೊಳಗೊಂಡ ಸಮಿತಿ ರಚಿಸಿದ್ದು, ಈ ಸಮಿತಿಯು ಕೃಷಿ, ಕೈಗಾರಿಕೆ, ಆರ್ಥಿಕ, ಸಾಮಾಜಿಕ, ಹಣಕಾಸಿನ ಮತ್ತು ತಾಂತ್ರಿಕ ಮೂಲ ಸೌಲಭ್ಯ ಮುಂತಾದ ವಲಯಗಳ ಅಭಿವೃದ್ಧಿಯನ್ನು ಗುರುತಿಸಿ ಸೂಚ್ಯಂಕ ನಿಗದಿಪಡಿಸಲಿದೆ. ಬಳಿಕ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ ಎಂದರು.

ಡಿಸಿ ಪ್ರಶಾಂತ ಕುಮಾರ ಮಿಶ್ರಾ ಮಾತನಾಡಿ, ಇಲ್ಲಿ ಉತ್ಪಾದಿಸುವ ಬೆಳೆಗಳಿಗೆ ಮೌಲ್ಯವರ್ಧನೆ ಆಗಬೇಕಿದೆ. ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ. ಟೆಕ್‌ಟೈಲ್ಸ್ ಹಬ್, ಮೈನಿಂಗ್, ಕೃಷಿ ಆಧಾರಿತ ಕೈಗಾರಿಕೆಗಳು, ಕೋಲ್ಡ್ ಸ್ಟೋರೆಜ್ ಘಟಕಗಳು, ಬೆಳೆಗಳಿಗೆ ಬೆಂಬಲ ಬೆಲೆ, ನೀರಾವರಿ, ಆಧುನಿಕ ಆಸ್ಪತ್ರೆಗಳು, ಸಣ್ಣ ಉದ್ಯಮಗಳಿಗೂ ಹೆಚ್ಚಿನ ಉತ್ತೇಜನ, ಶಿಕ್ಷಣ ಸಂಸ್ಥೆಗಳಿಗೆ ಮೂಲ ಸೌಕರ್ಯ ಸೇರಿದಂತೆ ಇನ್ನಿತರ ಅಂಶಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಶಿಕ್ಷಣ, ಆರೋಗ್ಯ, ಕೈಗಾರಿಕೆ, ಕೃಷಿ, ಮೂಲಸೌಕರ್ಯ, ತಂತ್ರಜ್ಞಾನ, ಅಭಿವೃದ್ಧಿ, ಸಮಸ್ಯೆಗಳ ಬಗ್ಗೆ ವಿಷಯಾಧಾರಿತ ಚರ್ಚೆ ನಡೆಸಿದ ಸಮಿತಿಯು ಅಧಿಕಾರಿಗಳಿಂದ, ಜಿಲ್ಲೆಯ ಸಂಘ ಸಂಸ್ಥೆಗಳ ಮುಖಂಡರಿಂದ ಮಾಹಿತಿ ಪಡೆದುಕೊಂಡರು. ಸಮಿತಿಯು ಗುರುತಿಸಿರುವ ವಿಷಯಗಳಲ್ಲದೇ ಜಿಲ್ಲೆಗೆ ಸಂಬಅಧಿಸಿದಂತೆ ಇನ್ನೂ ಅನೇಕ ವಿಷಯಗಳನ್ನು ಗಮನಿಸಲಿದೆ ಎಂದರು.