ಜಿಲ್ಲೆ

ಸರ್ಕಾರದ ಸೌಲಭ್ಯ ಪಡೆಯಲು ಅಂಗವಿಕಲರಿಗೆ ಎಂಎಲ್‌ಸಿ ವೈ.ಎಂ.ಸತೀಶ್ ಸಲಹೆ

Raghavendra Dandin

ಬಳ್ಳಾರಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಮೂಲಕ ಅಂಗವಿಕಲರು ಸ್ವಾವಲಂಬನೆಯ ಬದುಕನ್ನು ರೂಪಿಸಿಕೊಂಡು ಆದರ್ಶ ಜೀವನ ನಡೆಸಬೇಕು ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಸಲಹೆ ನೀಡಿದರು.

ನಗರದ ವಿಮ್ಸ್ ಆಸ್ಪತ್ರೆ ಸಮೀಪದ ಶಾಂತಿಧಾಮದಲ್ಲಿ ಸೋಮವಾರ ಜಿಲ್ಲಾ ಅಂಗವಿಕಲರ ಕಲ್ಯಾಣಭಿವೃದ್ಧಿ ಇಲಾಖೆ ಆಯೋಜಿಸಿದ್ದ ಅರ್ಹ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಗವಿಕಲರ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದ ಅನೇಕರು ಸ್ವಾವಲಂನಬನೆಯ ಜೀವನ ನಡೆಸುತ್ತಿದ್ದಾರೆ. ಇನ್ನೂ ಅನೇಕರು ಸಾಧನೆಗಳ ಮೂಲಕ ಸಮಾಜದಲ್ಲಿ ಗಣ್ಯರಾಗಿದ್ದಾರೆ ಎಂದರು.

ಅಂಗವಿಕಲರ ಅನೇಕ ಸಾಧನೆಗಳು ಸಾಮಾನ್ಯರಿಗೂ ಮಾದರಿಯಾಗಿವೆ. ಕೀಳರಿಮೆಯನ್ನು ಬಿಟ್ಟು ಸ್ವಾಭಿಮಾನ, ಸ್ವಾವಲಂಬನೆ ಮತ್ತು ಆದರ್ಶ ಬದುಕನ್ನು ನಡೆಸುವ ಛಲವನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಸಾಧನೆಯ ಹಾದಿ ಸುಗಮವಾಗಲಿದೆ ಎಂದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎಚ್.ಗೋವಿಂದಪ್ಪ ಮಾತನಾಡಿ, 2022-23ರ ಸಾಲಿನಲ್ಲಿ ಎಂಎಲ್‌ಸಿ ಸತೀಶ್ ಅವರು ತಮ್ಮ ಅನುದಾನದಡಿ 5 ಲಕ್ಷ ರೂ. ನೀಡಿದ್ದು, ಅದರಿಂದ ಕಂಪ್ಲಿ ಸಮೀಪದ ದೇವಸಮುದ್ರದ ಆನಂದಗಂಡಿ, ರಾರಾವಿಯ ಸಣ್ಣ ಬೀರಪ್ಪ, ತೆಕ್ಕಲಕೋಟೆಯ ಎಚ್.ವೀರೇಶ್, ಸಂಡೂರು ತಾಲೂಕಿನ ವಿ. ಗೊಲ್ಲರಹಟ್ಟಿಯ ಎಸ್.ಮಲ್ಲಮ್ಮ ಮತ್ತು ಕೋಳೂರು ಗ್ರಾಮದ ಹೊನ್ನೂರಸ್ವಾಮಿಗೆ ತ್ರಿಚಕ್ರ ವಾಹನವನ್ನು ನೀಡಲಾಗಿದೆ ಎಂದರು.