ಬಳ್ಳಾರಿ: ಹಂಪಿ ಉತ್ಸವಕ್ಕೆ ಪ್ರತಿ ವರ್ಷ ಏನಾದರೂ ಒಂದು ವಿಘ್ನ ಎದುರಾಗುತ್ತಿದೆ. ಎಲ್ಲ ಸರ್ಕಾರಗಳ ಅವಧಿಯಲ್ಲಿ ನಿಗದಿಯಂತೆ ಉತ್ಸವ ನಡೆದಿಲ್ಲ. ನ.3, 4 ಮತ್ತು 5 ರಂದು ಉತ್ಸವ ಆಯೋಜನೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಈ ಬಾರಿ ಒಂದು ದಿನ ಉತ್ಸವ ಆಚರಿಸಲಾಗುತ್ತಿದ್ದು, ಶೀಘ್ರ ದಿನಾಂಕ ಪ್ರಕಟಿಸಲಾಗುವುದು ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಚುನಾವಣಾ ನೀತಿ ಸಂಹಿತೆ ಇರುವುದರಿಂದ ವಿಜಯನಗರ ಜಿಲ್ಲೆ ಬಗ್ಗೆ ನಾನು ಮಾತನಾಡುವುದಿಲ್ಲ. ವಿಜಯನಗರ ಜಿಲ್ಲೆ ಘೋಷಣೆ ಬಗ್ಗೆ ನಾನು ಬಳ್ಳಾರಿಯಲ್ಲಿ ಹಾಗೂ ಜಿಲ್ಲೆಯ ಇತರ ಭಾಗದಲ್ಲಿ ಭಿನ್ನವಾಗಿ ಯಾಕೆ ಹೇಳಿಕೆ ನೀಡುತ್ತೇನೆ ಎಂಬುದನ್ನು ಪತ್ರಕರ್ತರೇ ಪತ್ತೆ ಹಚ್ಚಬೇಕೆಂದು ಸಲಹೆ ನೀಡಿದರು. ಶಿರಾ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ. ಕೆಲವರು ಕೆಮ್ಮು, ನೆಗಡಿ, ಜ್ವರ ಬಂದರೆ ಆತಂಕದಿಂದ ವೈದ್ಯರ ಬಳಿ ತೆರಳುತ್ತಿಲ್ಲ. ಇದರಿಂದಾಗಿ ರೋಗಿಗಳನ್ನು ಹುಡುಕಿಕೊಂಡು ಹೋಗಿ ಬಲವಂತದಿಂದ ಕೋವಿಡ್ ಪರೀಕ್ಷೆ ಮಾಡಲು ಆಗುವುದಿಲ್ಲ. ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವ ಸಾಧ್ಯತೆ ಕಂಡುಬರುತ್ತಿದೆ. ಮಾಧ್ಯಮದವರು ಪರಸ್ಪರ ಅಂತರ ಕಾಪಾಡುತ್ತಿಲ್ಲ ಎಂದರು.
ರಾಜ್ಯೋತ್ಸವದ ಲಿಖಿತ ಭಾಷಣ ಓದುವಾಗ ಅರಣ್ಯ ಸಚಿವರ ಎಡವಟ್ಟು; ಕನ್ನಡ ಶಬ್ದಗಳ ತಪ್ಪು ಉಚ್ಚರಣೆ
ಬಳ್ಳಾರಿ: ಈ ನಾಡನ್ನು ಶತವಾಹನದಿಂದ (ಶಾತವಾಹನ) ಆರಂಭಗೊಂಡು ವಿವಿಧ ರಾಜ ಮಹಾರಾಜರು ಆಳಿದ್ದಾರೆ. ಕರ್ನಾಟಕ ಭವ್ಯ ಪರಂಪರೆ ಪ್ರತಿನಿಧಿಸುವ ಪ್ರಾಚಾನೀಕ (ಪ್ರಾಚೀನ) ಇತಿಹಾಸವಾಗಿದೆ… ಇದು ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಭಾನುವಾರ ನಗರದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದಾಗ ಬಳಸಿದ ಪದಗಳು. ಲಿಖಿತ ಭಾಷಣ ಓದುವಾಗ ಕೆಲವೆಡೆ ಕನ್ನಡ ಶಬ್ದಗಳ ತಪ್ಪು ಉಚ್ಛರಣೆ ಮಾಡಿದರು. ಸಹಬಾಳ್ವೆಯನ್ನು ಸಂಬಾಳ್ವೆ, ಡಿಂಡಿಮವನ್ನು ಡಿಮಡಿಮ, ಜೀವನಾಡಿಯನ್ನು ಜೀವಳವಾಡಿ ಎಂದು ಹೇಳಿದರು. ಕನ್ನಡವನ್ನೂ ಕನ್ನಡೆ ಎಂದು ಹೇಳಿ ಅಚ್ಚರಿ ಮೂಡಿಸಿದರು.