ಜಿಲ್ಲೆ

ಬಳ್ಳಾರಿಯಲ್ಲಿ ಭಾನುವಾರವೂ ರಸ್ತೆಗೆ ಇಳಿಯದ ಬಸ್‌ಗಳು; ಖಾಸಗಿ ವಾಹನಗಳಿಗೆ ಮೊರೆ ಹೋದ ಜನ

Ballari

ಬಳ್ಳಾರಿ: ಸರ್ಕಾರಿ ನೌಕರರಾಗಿ ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ಸಿಬ್ಬಂದಿ ಕೈಗೊಂಡಿರುವ ಮುಷ್ಕರ ಭಾನುವಾರ ಮೂರು ದಿನ ಪೂರೈಸಿತು. ಹೀಗಾಗಿ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿತ್ತು.

ಕೇಂದ್ರ ಬಸ್ ನಿಲ್ದಾಣ ಮತ್ತು ಹಳೇ ಬಸ್ ನಿಲ್ದಾಣವು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದವು. ವಿವಿಧ ಗ್ರಾಮ, ತಾಲೂಕು ಮತ್ತು ದೂರದ ಊರುಗಳಿಗೆ ಹೊರಡಬೇಕಿದ್ದ ಬಸ್‌ಗಳು ನಿಲ್ದಾಣದಲ್ಲೇ ನಿಂತಿದ್ದವು. ಎರಡು ದಿನಗಳಿಂದ ಬಸ್ ಸಂಚಾರ ವಿರಳವಾದ್ದನ್ನು ಗಮನಿಸಿದ್ದ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋದರು. ಮುಷ್ಕರದ ಲಾಭವನ್ನು ಆಟೋ, ಟಂಟಂ, ಟ್ರ್ಯಾಕ್ಸ್, ಕ್ರೂಸರ್ ಸೇರಿ ಇತರ ಖಾಸಗಿ ವಾಹನಗಳು ಪಡೆದುಕೊಂಡವು. ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆದು ಓಡಾಡುತ್ತಿರುವುದು ಕಂಡುಬಂತು.