ಜಿಲ್ಲೆ

ಲಕ್ಷಾಂತರ ಭಕ್ತಗಣದ ಕನಕದುರ್ಗಮ್ಮ ದೇವಿ

ಬಳ್ಳಾರಿ : ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಕನಕ ದುರ್ಗಮ್ಮ ದೇವಸ್ಥಾನವೊಂದು ಎಂಬ ಖ್ಯಾತಿ ಪಡೆದಿದೆ. ದೇವಿಗೆ ನಗರ, ಜಿಲ್ಲೆ ಮತ್ತು ಅಂತರಾಜ್ಯ ಸೇರಿ ಲಕ್ಷಾಂತರ ಭಕ್ತ ಗಣವಿದೆ.

ಕಳೆದ ಎರಡು ಶತಮಾನಗಳಿಂದ ಯಾದವ ಸಮುದಾಯದ ಮೇಟಿ ವಂಶಸ್ಥರು ದೇವಿಗೆ ಪೂಜೆ ಮಾಡುತ್ತಿದ್ದಾರೆ. ಸದ್ಯ ಆರನೇ ತಲೆಮಾರಿನವರು ದುರ್ಗಮ್ಮ ದೇವಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ದುರ್ಗಾದೇವಿಯು ಹುತ್ತದಲ್ಲಿ ಉದ್ಭವಿಸಿರುವ ಹಿನ್ನೆಲೆ ಹುತ್ತಕ್ಕೆ ಪೂಜೆ ಮಾಡಲಾಗುತ್ತಿತ್ತು. ಕಳೆದ 45-50 ವರ್ಷಗಳಿಂದ ಭಂಡಾರ, ಕುಂಕುಮದಿಂದ ಪೂಜೆ ಮಾಡಲಾಗುತ್ತಿದ್ದ ದೇವಿಗೆ ನಂತರ ಹತ್ತು ಕಣ್ಣು, ಹತ್ತು ಕೈಗಳನ್ನು ಇಟ್ಟು ಪೂಜೆ ಮಾಡಲಾಯಿತು. ಇದೀಗ ಇಪ್ಪತೈದು ವರ್ಷಗಳಿಂದ ಸೀರೆಯಿಂದ ಅಲಂಕರಿಸಿ ಪೂಜೆ ಮಾಡಲಾಗುತ್ತಿದೆ. ಪೂರ್ವ ದಿಕ್ಕಿನಲ್ಲಿ ಪೂಜೆ ಮಾಡುತ್ತಿದ್ದಾಗ ಸಾಕಷ್ಟು ಅನಾಹುತಗಳು ಸಂಭವಿಸಿದ್ದವು. ಆಗ ಶಾಂತಿ ಸ್ವರೂಪಳಾಗಬೇಕು ಎಂಬುದಾಗಿ ಕೋರಿ, ಪಶ್ಚಿಮ ದಿಕ್ಕಿನಲ್ಲಿ ಬೆನ್ನಿಗೆ ಪೂಜೆ ಮಾಡಲಾಗುತ್ತಿದೆ.

ದೇವಿ ಮಹಿಮೆ : ಕನಕದುರ್ಗಮ್ಮ ದೇವಸ್ಥಾನವು ಅಂದಾಜು 180 ರಿಂದ 200 ವರ್ಷಗಳ ಹಿನ್ನೆಲೆ ಹೊಂದಿದೆ. ಆ ಸಂದರ್ಭದಲ್ಲಿ ದೇವಸ್ಥಾನ ಇರುವ ಪ್ರದೇಶವೆಲ್ಲಾ ಅರಣ್ಯ ಭೂಮಿ, ಈಗ ದೇವಿಯ ಧಾರ್ಮಿಕ ಕ್ಷೇತ್ರವಾಗಿ ಹೊರ ಹೊಮ್ಮಿದೆ. ದೇವಿಗೆ ವಾರದ ಪ್ರತಿ ಶುಕ್ರವಾರ, ಮಂಗಳವಾರ, ಅಮಾವಾಸ್ಯೆ, ಹುಣ್ಣಿಮೆಯಂದು ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ. ಗಾಣಿಗ ಸಮುದಾಯದಿಂದ ಕನಕದುರ್ಗಮ್ಮ ದೇವಿಗೆ ವಾರ್ಷಿಕ ಸಿಡಿಬಂಡಿ ಉತ್ಸವ ನಡೆಯುತ್ತದೆ. ಸಿಡಿಬಂಡಿಯಂದು ದೇವಸ್ಥಾನದ ಮೇಟಿ ಕುಟುಂಬದಿಂದ ಕುಂಭ ಬಂದ ನಂತರ ಪೂಜೆಗಳು ಆರಂಭವಾಗಲಿದೆ. ನಂತರ ಎತ್ತುಗಳ ಮೆರವಣಿಗೆ ನಡೆಸಿ ದೇವಸ್ಥಾನದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಗುತ್ತದೆ. ದೇವರಿಗೆ ಭಕ್ತರು ಹೂವು, ಬಾಳೆ ಹಣ್ಣು ಎಸೆಯುವುದು ವಾಡಿಕೆ. ಆದರೆ, ಜೀವಂತವಿರುವ ಕೋಳಿ ಎಸೆದು ದೇವಿಗೆ ಭಕ್ತಿ ಸಮರ್ಪಿಸುವುದ ಜತೆಗೆ ಉತ್ಸವವನ್ನು ಕಣ್ತುಂಬಿಕೊಳ್ಳುತ್ತಾರೆ.

ನಾಲ್ಕು ಬಾರಿ ಚಿನ್ನಾಭರಣ ಅಲಂಕಾರ : ಜಿಲ್ಲೆಯ ಮಾಜಿ ಸಚಿವರೊಬ್ಬರು ದೇವಸ್ಥಾನಕ್ಕೆ ಚಿನ್ನಾಭರಣಗಳನ್ನು ನೀಡಿದರು. ವರ್ಷದಲ್ಲಿ ಸಿಡಿಬಂಡಿ ಉತ್ಸವ, ದಸರಾ ಹಾಗೂ ಮಾಜಿ ಸಚಿವರ ಕೋರಿಕೆ ಮೇರೆಗೆ ಯುಗಾದಿ ಮತ್ತು ವರಮಹಾಲಕ್ಷ್ಮೀ ವ್ರತದಂದು ಸೇರಿ ವರ್ಷದಲ್ಲಿ ನಾಲ್ಕು ಬಾರಿ ಚಿನ್ನಾಭರಣ ಅಲಂಕಾರ ಮಾಡಿ ಪೂಜೆ ಸಲ್ಲಿಸುವ ಸಾಂಪ್ರದಾಯ ರೂಢಿಯಲ್ಲಿದೆ.

ಕಳೆದ ಕೆಲ ವರ್ಷಗಳಿಂದ ಕೋಟ್ಯಾಂತರ ರೂ. ವೆಚ್ಚದಲ್ಲಿ ವೆಚ್ಚದಲ್ಲಿ ದೇವಸ್ಥಾನವನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗಿದೆ. ದೇವಸ್ಥಾನದ ಪಶ್ಚಿಮ ದಿಕ್ಕಿನಲ್ಲಿ ರಾಜಾಗೋಪುರ ಸೇರಿ ನಾಲ್ಕು ದಿಕ್ಕುಗಳಲ್ಲಿ ಗೋಪುರ, ಸುತ್ತಲೂ ಕಲ್ಲಿನ ಕಾಂಪೌಂಡ್, ಯಾತ್ರಿ ನಿವಾಸ, ದೇವಸ್ಥಾನದ ಒಳಗೆ ಗ್ರಾನೈಟ್ ಅಳವಡಿಸಲಾಗಿದೆ. ಈ ಮೊದಲು ಇದ್ದ ಹಳೆಯ ಬಾವಿಯನ್ನು ಪುಷ್ಕರಣಿ, ಹೊರಾಂಗಣದಲ್ಲಿ ದುರ್ಗಾದೇವಿ, ಮಹಿಷಾಸುರ ವಿಗ್ರಹಗಳನ್ನು ನಿರ್ಮಿಸಲಾಗಿದೆ. ಜಿಲ್ಲೆಯ ಹಾಲಿ ಶಾಸಕರು ದೇವಸ್ಥಾನದ ಹೊರ ಆವರಣದಲ್ಲಿ ಕಾಂಕ್ರಿಟ್ ಅಳವಡಿಕೆ ಸೇರಿದಂತೆ ನಾನಾ ಅಭಿವೃದ್ಧಿಗೆ ಕೈಗೊಂಡಿದ್ದಾರೆ.

ದಸರಾ ಜೋರು : ನವರಾತ್ರಿ ಹಿನ್ನೆಲೆ ದೇವಸ್ಥಾನದಲ್ಲಿ ಶಕ್ತಿ ಪೀಠದ ವಿಗ್ರಹ ಪ್ರತಿಷ್ಠಾಪಿಸಿ ದಸರಾ ದಿನದಂದು ಮೆರವಣಿಗೆಯ ಮೂಲಕ ನಿಮಜ್ಜನೆ ಮಾಡಲಾಗುವುದು. ಹಬ್ಬದಲ್ಲಿ ಗರ್ಭ ಗುಡಿಯವರೆಗೆ ಬಂಗಾರದ ಅಭರಣಗಳ ಅಲಂಕಾರ ಮಾಡಲಾಗುತ್ತದೆ. ನಿತ್ಯ ದೇವಿಗೆ ವಿಶೇಷ ಪೂಜೆ, ಅಭಿಷೇಕ, ಹೋಮ ಹಾಗೂ ಭಕ್ತರಿಗೆ ದಾಸೋಹ ನಡೆಯಲಿವೆ. ದೀಪ ಹಚ್ಚಲು ಬರುವ ಭಕ್ತರಿಗೆ ಕಟ್ಟೆಯ ಬನ್ನಿಮಂಟಪ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಸಂಜೆ ಪ್ರವಚನಗಾರರಿಂದ ದೇವಿ ಪುರಾಣ, ಸಂಗೀತ, ನೃತ್ಯ ಹಾಗೂ ನಾಟಕಗಳ ಪ್ರದರ್ಶನ ಆಯೋಜಿಸಲಾಗಿದೆ. ರಾತ್ರಿಯಿಂದ ಬೆಳಗ್ಗೆಯವರೆಗೆ ಭಜನಾ ಕಾರ್ಯಕ್ರಮ ಜರುಗಲಿದೆ. ಭಕ್ತರಿಂದ ಶ್ರೀಲಲಿತಾ ಸಹಸ್ರ ಸಾಮಾವಳಿ ಪಾರಾಯಣ ನಡೆಯಲಿದೆ. ನವರಾತ್ರಿ ಕೊನೆಯ ಮೂರು ದಿನಗಳಲ್ಲಿ ಕ್ರಮವಾಗಿ ದುರ್ಗಾಷ್ಠಮಿ, ನವಮಿ, ವಿಜಯದಶಮಿ ಹಬ್ಬ ನಡೆಯಲಿದ್ದು, ಅದೇ ದಿನದಂದು ಸಂಜೆ ಪಲ್ಲಕ್ಕಿ ಉತ್ಸವ ಹಾಗೂ ಲಂಕದಹನ ಅದ್ದೂರಿಯಾಗಿ ವಿಜೃಂಭಣೆಯಿಂದ ನೆರವೇರಲಿದೆ.