ಜಿಲ್ಲೆ

ಸೋಂಕಿತರಿಗೆ ನೈತಿಕ ಬಲ ತುಂಬಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಎಚ್‌ಐವಿ ಸೋಂಕಿಗೆ ತುತ್ತಾದವರು ಖಾಯಿಲೆಗಿಂತ ಹೆಚ್ಚಾಗಿ ಮಾನಸಿಕವಾಗಿ ಭಯಭೀತರಾಗುತ್ತಾರೆ. ಸಮಾಜದಲ್ಲಿ ಎಲ್ಲ ರೀತಿಯ ಹಕ್ಕು ಹೊಂದಲು ಅರ್ಹರಿದ್ದು, ಸ್ಪೂರ್ತಿ, ಧೈರ್ಯ ಮತ್ತು ನೈತಿಕ ಬಲ ಒದಗಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಹೇಳಿದರು.

ನಗರದ ಡಿಎಚ್ಒ ಕಚೇರಿ ಸಭಾಂಗಣದಲ್ಲಿ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ “ಹಕ್ಕುಗಳನ್ನು ಪಡೆಯಲು ಸರಿಯಾದ ಮಾರ್ಗ ಅನುಸರಿಸೋಣ: ನನ್ನ ಆರೋಗ್ಯ ನನ್ನ ಹಕ್ಕು” ಎಂಬ ಘೋಷವಾಕ್ಯದಡಿ ಮಂಗಳವಾರ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಚ್ಐವಿ ಸೋಂಕಿತರನ್ನು ಮಾನವೀಯ ದೃಷ್ಟಿಯಿಂದ ನೋಡುವುದರ ಜತೆಗೆ ಧೈರ್ಯ ತುಂಬುವ ಕೆಲಸ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.

ಎಚ್ಐವಿ ಸೋಂಕಿನಿಂದ ಹರಡುವ ಏಡ್ಸ್ ಕಾಯಿಲೆಯ ಬಗ್ಗೆ ಜನರಲ್ಲಿ ಇರುವ ಭಯವನ್ನು ದೂರ ಮಾಡುವುದರ ಜತೆಗೆ ಎಚ್ಐವಿ ಏಡ್ಸ್ ನಿಂದ ಉಂಟಾಗುವ ಕಳಂಕ ಮತ್ತು ತಾರತಮ್ಯ ಹೋಗಲಾಡಿಸಿ, ಹೊಸ ಪ್ರಕರಣ ಹಾಗೂ ಸಾವುಗಳನ್ನು ಸೊನ್ನೆಗೆ ತರಲು ಜಾಗೃತಿ ಮೂಲಕ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದರು.

ಡಿಎಚ್ಒ ಡಾ.ವೈ ರಮೇಶ್ ಬಾಬು ಮಾತನಾಡಿ, ಸಮುದಾಯದ ಪ್ರತಿಯೊಬ್ಬರಿಗೂ ಸೋಂಕು ಹರಡುವ ವಿಧಾನ ಹಾಗೂ ಮುಂಜಾಗೃತೆಗಳ ಕುರಿತು ವ್ಯಾಪಕ ಪ್ರಚಾರ ಕಾರ್ಯವನ್ನು ಕೈಗೊಳ್ಳುವ ಮೂಲಕ ಪ್ರಸ್ತುತ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣವನ್ನು ಗಣನೀಯವಾಗಿ ಕಡಿಮೆಗೊಳಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕದ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ ಮಾತನಾಡಿದರು.

ಜಾಗೃತಿ ಜಾಥಾಕ್ಕೆ ಚಾಲನೆ:

ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ಡಿಎಚ್ಒ ಕಚೇರಿ ಆವರಣದಿಂದ ಜಾಗೃತಿ ಜಾಥಾ ನಡೆಯಿತು.

ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಎಚ್‌ಐವಿ ಸೋಂಕು ಕುರಿತಾಗಿ ಜಾಗೃತಿ ಮೂಡಿಸಿತು.

ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಏಡ್ಸ್ ನಿರ್ಮೂಲನೆಗಾಗಿ ಆಪ್ತಸಮಾಲೋಚನೆ ಹಾಗೂ ಜಾಗೃತಿ ಮೂಡಿಸುವ, ಮುಖ್ಯ ವಾಹಿನಿಗೆ ತರಲು, ಸೋಂಕು ಪರೀಕ್ಷೆ ಕೈಗೊಂಡ, ಉತ್ತಮ ಮೇಲ್ವಿಚಾರಣೆ, ಎಚ್‌ಐವಿ ಸಮುದಾಯಕ್ಕೆ ಬೆಂಬಲ ನೀಡಿದ ಸೇವೆ ಪರಿಗಣಿಸಿ ಗಣ್ಯರಿಗೆ ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಎಚ್‌ಐವಿ ಸೋಂಕಿನಿಂದಾಗುವ ಪರಿಣಾಮ ಕುರಿತು ಕಿರು-ನಾಟಕ ನಡೆಸಿಕೊಟ್ಟರು.