ಜಿಲ್ಲೆ

ಮಗುವಿಗೆ ತಪ್ಪದೇ ಲಸಿಕೆ ಹಾಕಿಸಿ

ಬಳ್ಳಾರಿ; ಮಗುವಿನ ವಯಸ್ಸು ಒಂಬತ್ತು ತಿಂಗಳ ಬಳಿಕ ತಪ್ಪದೇ ದಡಾರ-ರೂಬೆಲ್ಲಾ ಲಸಿಕೆ ಹಾಕಿಸಬೇಕು ಎಂದು ಕಲಬುರಗಿ ವಿಭಾಗದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉಪನಿರ್ದೇಶಕ ಡಾ.ಶರಣಬಸಪ್ಪ ಗಣಜಲಖೇಡ ಹೇಳಿದರು.

ನಗರದ ಡಿಎಚ್‌ಒ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ವೈದ್ಯಾಧಿಕಾರಿಗಳ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಸಾಮಾನ್ಯವಾಗಿ ಬೇಸಿಗೆಯಲ್ಲಿ ಬೆವರುಸಾಲೆಯಿಂದ ದೇಹದ ಮೇಲೆ ನುಚ್ಚು ಗುಳ್ಳೆಗಳು ಕಂಡು ಬರುವುದು ಸಹಜ. ದಡಾರ ಸೋಂಕು ಸಹ ನೋಡಲು ಇದೇ ರೀತಿ ಕಂಡು ಬರುತ್ತದೆ. ಮುಂಜಾಗೃತೆ ಕ್ರಮವಾಗಿ ಯಾವುದೇ ತಪ್ಪು ನಂಬಿಕೆಗಳನ್ನು ಪಾಲಿಸಿದೆ ಮಕ್ಕಳಿಗೆ ದಡಾರ- ರೂಬೆಲ್ಲಾ ಲಸಿಕೆ ಹಾಕಿಸಬೇಕು ಎಂದರು.

ಮೇ 26 ರಿಂದ ಒಂದು ವಾರ ಜರಗುವ ವಿಶೇಷ ಲಸಿಕಾ ಕಾರ್ಯಕ್ರಮದಲ್ಲಿ ದಡಾರ ಪ್ರಕರಣಗಳು ಈ ಪೂರ್ವದಲ್ಲಿ ವರದಿಯಾದ ಗ್ರಾಮ, ಬಡಾವಣೆಗಳನ್ನು ಗುರಿಯಾಗಿಟ್ಟುಕೊಂಡು ಸಮುದಾಯದಲ್ಲಿ ಅಮ್ಮ, ತಟ್ಟು, ಗಂಜೀನಿ ಎಂದು ಕರೆಯಲ್ಪಡುವ ದಡಾರ ರೋಗ ಕುರಿತು ಜಾಗೃತಿ ನೀಡಬೇಕು ಎಂದರು.

ಪಾಲಕರು ಸಹ ತಮ್ಮ ಮಕ್ಕಳಿಗೆ 9 ತಿಂಗಳ ಬಳಿಕ ಹಾಗೂ ಒಂದೂವರೆ ವರ್ಷದ ಅವಧಿಯಲ್ಲಿ ತಪ್ಪದೆ ದಡಾರ ಲಸಿಕೆ ಹಾಕಿಸಲು ಮುಂದಾಗಬೇಕು. ಈ ಕುರಿತು ವ್ಯಾಪಕ ಜಾಗೃತಿ ನೀಡಬೇಕು ಎಂದು ತಿಳಿಸಿದರು.

ಡಿಎಚ್‌ಒ ಡಾ.ವೈ.ರಮೇಶಬಾಬು ಮಾತನಾಡಿ, ದಡಾರ ವೈರಸ್ ಹೊಂದಿದ ಮಗುವಿನ ಸಂಪರ್ಕಕ್ಕೆ ಬರುವ ಇನ್ನೊಂದು ಮಗುವಿಗೆ ಬರುವ ಸಾಧ್ಯತೆ ಹೆಚ್ಚು ಇದ್ದು, ಕೆಮ್ಮು ಮತ್ತು ಸೀನುವಿಕೆಯಿಂದ ಇನ್ನೊಬ್ಬರಿಗೆ ಹರಡುತ್ತದೆ. ದಡಾರ ಸೋಂಕಿತ ವ್ಯಕ್ತಿಗೆ ಒಡ್ಡಿಕೊಂಡ ಸುಮಾರು 10 ದಿನಗಳ ನಂತರ ದಡಾರದ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ ಎಂದು ತಿಳಿಸಿದರು.

ಇದೇ ವೇಳೆ ವಿವಿಧ ರಾಷ್ಟ್ರೀಯ ಕಾರ್ಯಕ್ರಮಗಳ ಕುರಿತು ಸುಧೀರ್ಘ ಚರ್ಚಿಸಿದರು.