ಜಿಲ್ಲೆ

ಅದ್ದೂರಿ ಆಚರಣೆಗೆ ಸಿದ್ಧತೆ ಕೈಗೊಳ್ಳಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಜಿಲ್ಲೆಯಲ್ಲಿ ಮಾರ್ಚ್ ಮೊದಲ ವಾರದಲ್ಲಿ ರಾಜ್ಯಮಟ್ಟದ ಬುಡಕಟ್ಟು ಉತ್ಸವ ಆಯೋಜಿಸಲಾಗುತ್ತಿದ್ದು, ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಿ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.

ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಬುಡಕಟ್ಟು ಸಮುದಾಯದ ಭಾಷೆ, ಕಲೆ, ಸಂಸ್ಕೃತಿ, ಆಚಾರ-ವಿಚಾರ ಮತ್ತು ಉಡುಗೆ-ತೊಡುಗೆ ಬಿಂಬಿಸಬೇಕು. ಪ್ರಸ್ತಕ ಸಾಲಿನ ಪರಿಷ್ಟ ಪಂಗಡ ಉಪಯೋಜನೆಯಡಿ ರಾಜ್ಯ ಮಟ್ಟದ ಬುಡಕಟ್ಟು ಉತ್ಸವ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಯೋಜಿಸಲು ರಾಜ್ಯ ಸರ್ಕಾರವು ತೀರ್ಮಾನಿಸಿದೆ. ಕಾರ್ಯಕ್ರಮ ಯಶಸ್ವಿಗೊಳಿಸಲು ರೂಪು-ರೇಷೆ ಕೈಗೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಮೊಟ್ಟ-ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಒಂದು ದಿನದ ರಾಜ್ಯ ಮಟ್ಟದ ಬುಡಕಟ್ಟು ಉತ್ಸವ ದ ಸ್ಥಳ ಮತ್ತು ದಿನ ನಿಗದಿಪಡಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು. ಇದಕ್ಕೆ ಬೇಕಾದ ಎಲ್ಲ ರೀತಿಯ ಸಲಹೆ-ಸೂಚನೆ ಬುಡಕಟ್ಟು ಸಮುದಾಯದ ಮುಖಂಡರಿಂದ ಪಡೆಯಬೇಕು ಎಂದು ತಿಳಿಸಿದರು.

ರಾಜ್ಯದ ವಿವಿಧೆಡೆಯಿಂದ 600 ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಉಟ-ವಸತಿ, ವಾಹನ ವ್ಯವಸ್ಥೆ ಕೈಗೊಳ್ಳಲು ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಬೇಕು ಎಂದು ನಿರ್ದೇಶಿಸಿದರು.

ಜಿಲ್ಲೆಯ ವಿವಿಧ ಪರಿಶಿಷ್ಟ ವರ್ಗಗಳ ವಸತಿ ನಿಲಯ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಭಾಗವಹಿಸಲು ಬುಡಕಟ್ಟು ಸಮುದಾಯದ ಕುರಿತಾಗಿ ಕವಿತೆಗಳು, ಕಾವ್ಯ, ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆ ಆಯೋಜಿಸಬೇಕು. ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ ಚೆಲವಾದಿ ಮಾತನಾಡಿ, ಬುಡಕಟ್ಟು ಉತ್ಸವವು ಪರಿಶಿಷ್ಟ ಪಂಗಡದ ವಿವಿಧ ಬುಡಕಟ್ಟು ಸಮುದಾಯದ ಕಲಾವಿದರಿಗೆ ಅವರ ಸಾಹಿತ್ಯ, ಕಲೆ ಪ್ರದರ್ಶಿಸಲು ವೇದಿಕೆ ಕಲ್ಪಿಸಿಕೊಡುವುದು ಇದರ ಮುಖ್ಯ ಉದ್ದೇಶವಾಗಿದೆ. ಸಮುದಾಯದಲ್ಲಿ ಕವಿಗಳು, ಜಾನಪದ, ನೃತ್ಯ, ಸಂಗೀತ ಮತ್ತು ಚಿತ್ರ ಕಲಾವಿದರು, ಶಿಲ್ಪೆ ಕಲಾವಿದರು ಸಹ ಇದ್ದು, ಅವರಿಗೂ ಅವಕಾಶ ಕಲ್ಪಿಸಲಾಗುವುದು ಎಂದರು.

ಬಳಿಕ ಬುಡಕಟ್ಟು ಸಮುದಾಯದ ಮುಖಂಡರು ಮಾತನಾಡಿ, ಜಿಲ್ಲೆಯ ಐದು ತಾಲೂಕುಗಳನ್ನೊಳಗೊಂಡ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು. ಮುಖ್ಯವಾಗಿ ಅಳಿವಿನಂಚಿನಲ್ಲಿರುವ ಬುಡಕಟ್ಟು ನೆಲೆಗಳನ್ನು ಬಿಂಬಿಸುವಂತಹ ಜನಮಾನಸ ಕಾರ್ಯಕ್ರಮವಾಗಬೇಕು. ಬುಡಕಟ್ಟು ಸಮುದಾಯದ ವೇಶ-ಭೂಷಣ ಪ್ರದರ್ಶಿಸಲು ವಸ್ತು-ಪ್ರದರ್ಶನ ಮಳಿಗೆ ಹಾಕಬೇಕು ಎಂದು ಸಭೆಗೆ ತಿಳಿಸಿದರು.