ಬಳ್ಳಾರಿ ; ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮುಂಗಾರು ಮಳೆಯಿಂದ ನಗರ ಸೇರಿ ಜಿಲ್ಲಾದ್ಯಂತ ನಲುಗಿದೆ.
ಮಳೆ ಆರಂಭವಾಗುವ ಮುನ್ನವೇ ನಗರದ ವಿವಿಧ ಕಾಲನಿಗಳ ಒಳಚರಂಡಿ ಹಾಗೂ ರಾಜಕಾಲುವೆಗಳು ದುರಸ್ತಿಗೊಳಿಸದೆ ಇರುವುದರಿಂದ ಸಣ್ಣ ಪ್ರಮಾಣದ ಮಳೆ ಸುರಿದರೂ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗುತ್ತವೆ. ಅಲ್ಲದೆ, ನಿರಂತರವಾಗಿ ಸುರಿದ ಮಳೆಯಿಂದ ತಗ್ಗು ಪ್ರದೇಶದ ನಿವಾಸಿಗಳಿಗೆ ವಾಸಕ್ಕೆ ಯೋಚನೆಯಾಗಿದೆ. ಕಾಲನಿಯ ಬೀದಿಗಳ ಹೊರಚರಂಡಿ ಸ್ವಚ್ಛಗೊಳಿಸದ ತ್ಯಾಜ್ಯವನ್ನು ಬೇರೆಡೆ ಸಾಗಿಸದೆ ರಸ್ತೆಯಲ್ಲಿ ಬೀಡುವುದರಿಂದ ಮಳೆಯಿಂದ ಮತ್ತೆ ಚರಂಡಿಗೆ ಸೇರುವುದು ಅಥವಾ ತಗ್ಗು ಮನೆಗಳಿಗೆ ಹರಿದು ವಿವಿಧ ರೋಗಗಳು ಹರಡುತ್ತವೆ ಎಂಬ ದೂರಗಳು ಕೇಳಿವೆ. ಇದಲ್ಲದೆ, ಮಳೆ ಹಾಗೂ ಒಳಚರಂಡಿಯ ಕಲುಷಿತ ನೀರು ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಹರಿಯುವುದು ಸರ್ವೆ ಸಾಮಾನ್ಯವಾಗಿದೆ. ಇಲ್ಲಿನ ಹೊಸ, ಹಳೆ ಹಾಗೂ ಖಾಸಗಿ ಬಸ್ ನಿಲ್ದಾಣ ಹಾಗೂ ಆವರಣಗಳಲ್ಲಿ ಸ್ವಚ್ಛತೆಯಿಲ್ಲದೆ ಮಳೆ ಸುರಿದ ವೇಳೆ ಗಬ್ಬು ನಾರುತ್ತದೆ. ವಿವಿಧಡೆ ಸಂಚಾರಿಸುವ ಪ್ರಯಾಣಿಕರು ಹೈರಾಣಗಿದ್ದಾರೆ.
ದುರಸ್ತಿಗೊಳ್ಳದ ಕೆಳ ಸೇತುವೆ : ಇಲ್ಲಿನ ಎಸ್.ಎನ್.ಪೇಟೆಯ ಹಾಗೂ ಜಿಲ್ಲಾ ಕ್ರೀಡಾಂಗಣ ರಸ್ತೆಯ ರೈಲು ಕೆಳ ಸೇತುವೆಗಳಲ್ಲಿ ಮಳೆ ಸುರಿದ ವೇಳೆ ನೀರು ನಿಂತ ವಾಹನ ಸವಾರರು ಆ ಸೇತುವೆಗಳಿಂದ ಸಂಚಾರಿಸಲು ಪರದಾಡಬೇಕಿದೆ. ಅಲ್ಲದೆ, ಎರಡು ಸೇತುವೆಗಳಿಂದ ಬಿಮ್ಸ್ , ಟ್ರಾಮ್ ಕೇರ್, ಶಾಲಾ ಕಾಲೇಜು ಹಾಗೂ ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಮುಖ್ಯವಾದ ರಸ್ತೆಗಳಯಾಗಿವೆ. ಆದ್ದರಿಂದ, ಕೆಲವೊಂದು ಬಾರಿ ಅಂಬುಲೆನ್ಸ್ ಹಾಗೂ ಸಾರಿಗೆ ಬಸ್‌ಗಳು ಸೇತುವೆ ಕೆಳಗಡೆ ಕೆಟ್ಟು ನಿಂತ ಘಟನೆಗಳು ನಡೆದಿವೆ. ಸಾರ್ವಜನಿಕರೆ ಅರ್ಧದಲ್ಲಿಯೇ ನಿಂತ ವಾಹನಗಳನ್ನು ತಳ್ಳಿಕೊಂಡು ರಸ್ತೆಯ ದಡ ಸೇರಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಈ ಎರಡು ಸೇತುವೆಗಳಲ್ಲಿ ಮಳೆ ಸುರಿದರೆ ನೀರು ನಿಲ್ಲುತ್ತವೆ ಎಂಬುದರ ಬಗ್ಗೆ ಅಧಿಕಾರಿಗಳ ಗಮನಕ್ಕೆ ಇದ್ದರೂ ಮಳೆಗಾಲ ಆರಂಭವಾಗುವ ಮುನ್ನವೇ ದುರಸ್ತಿಗೆ ಮುಂದಾಗುವುದಿಲ್ಲ. ಕೇವಲ ಮಳೆ ಸುರಿದ ವಾಹನಸವಾರರಿಗೆ ಆಡಚಣೆ ಉಂಟಾದ ವೇಳೆ ಮೋಟಾರ್ ಮೂಲಕ ನೀರು ಹೊರ ಹಾಕಲು ಯತ್ನಿಸುವುದು ಸಾಮಾನ್ಯವಾಗಿದೆ.
ಪ್ರವಾಸಿ ತಾಣ ತಲ್ಲಣ : ಜಿಲ್ಲೆಯ ಪ್ರವಾಸಿ ತಾಣವೆಂದು ಬಿಂಬಿತವಾಗಿರುವ ಸಂಡೂರು ತಾಲೂಕು ಪೂರ್ವ ಮುಂಗಾರು ಮಳೆಗೆ ಅಕ್ಷರಶಃ ಅಸ್ತವ್ಯಸ್ತವಾಗಿದೆ. ಕಳೆದ ನಾಲ್ಕು ಬಾರಿ ಶಾಸಕ ಹಾಗೂ ಹಾಲಿ ಸಂಸದರಾಗಿ ಆಯ್ಕೆಯಾಗಿರುವ ಈ.ತುಕಾರಾಮ್ ತವರೂ ಕ್ಷೇತ್ರ ಮಳೆ ಎದುರಿಸಲು ಸನ್ನದ್ಧವಾಗಿಲ್ಲ ಎಂಬಂತೆಯಾಗಿದೆ. ಸಂಡೂರು, ತೋರಣಗಲ್ಲು ಹೋಬಳಿಯ ಹಳ್ಳಿಗಳಲ್ಲಿ ಮಳೆ ಸುರಿದ ರಸ್ತೆಗಳಲ್ಲಿ ನೀರು ಹರಿದು ಹದೆಗಟ್ಟಿವೆ. ಯಶವಂತನಗರ ಗ್ರಾಮದಲ್ಲಿ ಭಾರಿ ಮಳೆಗೆ ರೈಲ್ವೆ ಮೇಲ್ಮಟ್ಟದ ಸೇತುವೆಯು ಕೆಳಭಾಗದಲ್ಲಿ ಮಳೆಯ ನೀರು ಭಾರಿ ಪ್ರಮಾಣದಲ್ಲಿ ಸಂಗ್ರಹಗೊಂಡಿದ್ದರಿಂದ ಸಾರಿಗೆ ಬಸ್ ಸೇರಿದಂತೆ ವಿವಿಧ ವಾಹನಗಳ ಸವಾರರು ಎರಡು ತಾಸುಗಳ ಕಾಲ ಪರದಾಡಿವೆ. ಮಳೆಗಾಲದಲ್ಲಿ ಹಸಿರು ತುಂಬಿರುವ ಸಂಡೂರನ್ನು ವೀಕ್ಷಿಸಲು ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದ ವೇಳೆ ಸೂಕ್ತ ಸೌಕರ್ಯಗಳಿಲ್ಲದೆ ಪ್ರವಾಸಿಗರು ಹೈರಾಣಗಿದ್ದಾರೆ. ಅಲ್ಲದೆ, ಮಳೆಗಾಲದ ವೇಳೆ ರಸ್ತೆಗಳಲ್ಲಿ ಆದಿರು ತುಂಬಿದ ಬೃಹತ್ ಲಾರಿಗಳ ಓಡಾಟದಿಂದ ಅಪಘಾತಗಳ ಸಂಭವಿಸುವ ಎಂಬ ಭಯ ಕಾಡುತ್ತಿದೆ. ಜಿಲ್ಲೆಯ ಸಿರಗುಪ್ಪ ತಾಲೂಕಿನ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು ಈವರೆಗೂ ಅಧಿಕಾರಿಗಳು ದುರಸ್ತಿಗೆ ಮುಂದಾಗಿಲ್ಲ. ಮಳೆಯಿಂದ ನೀರು ತುಂಬಿಕೊಂಡು ವಾಹನಸವಾರರು ಅಘಘಾತಕ್ಕೆ ಈಡಾಗುವ ಸಂಭವ ಹೆಚ್ಚಿದೆ. ಎಪಿಎಂಸಿಯಲ್ಲಿ ಬೆಂಬಲ ಬೆಲೆಯಡಿ ಜೋಳ ಖರೀದಿ ಬಯಲು ಪ್ರದೇಧಶದಲ್ಲಿ ಸಂಗ್ರಹಿಸಿರುವುದರಿಂದ ಹಾನಿಯಾಗಲಿವೆ. ಕಂಪ್ಲಿ ಹಾಗೂ ಕುರುಗೋಡು ತಾಲೂಕು ಕೇಂದ್ರಗಳಲ್ಲಿ ಈ ವ್ಯವಸ್ಥೆಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಮಳೆ ವಿವರ : ಬಳ್ಳಾರಿ 2.8, ಸಂಡೂರು 5.0, ಸಿರಗುಪ್ಪ 5.1., ಕುರುಗೋಡು 16.2, ಕಂಪ್ಲಿ 9.4 ಒಟ್ಟಾರೆ ಜಿಲ್ಲಾ 6.2 ಮಿ.ಮೀ. ಮಳೆಯಾಗಿದೆ. ಅಲ್ಲದೆ, ಜಿಲ್ಲೆಯಲ್ಲಿ ವಾರ್ಷಿಕ 599.5 ಮಿ.ಮೀ ವಾಡಿಕೆ ಮಳೆಯಿದ್ದು, ಕಳೆದ ವರ್ಷ ಮೇ 20 ರವರೆಗೆ 53.6 ಮಿ.ಮೀ ಮಳೆಯಾಗಿದೆ. ಪ್ರಸ್ತುತ 88.4 ಮಿ.ಮೀ ಮಳೆಯಾಗಿ ಸುಮಾರು ಶೇ. 64% ರಷ್ಟು ಮಳೆ ಹೆಚ್ಚಾಗಿ ಸುರಿದಿದೆ. ಕಳೆದ ಏಪ್ರಿಲ್ ತಿಂಗಳಿಂದ ನಾಲ್ವರು ಸಿಡಿಲಿಗೆ ಬಲಿಯಾಗಿದ್ದಾರೆ. ಕಳೆದ ತಿಂಗಳಿಂದ 12 ಪ್ರಾಣಿಗಳು ಹಾಗೂ 22 ಮನೆಗಳು ಮಳೆಗೆ ಕುಸಿತಗೊಂಡಿವೆ. ಈ ಎಲ್ಲ ಕುಟುಂಬಗಳಿಗೆ ಪರಿಹಾರ ಹಣ ವಿತರಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿ ತಿಳಿಸಿದರು. ಆದರೆ, ಈವರೆಗೂ ವಾಡಿಕೆಗಿಂತ ಹೆಚ್ಚಾಗಿ ಮಳೆ ಸುರಿದಿದ್ದು ಜಿಲ್ಲೆಯ ಹಾಲಿ ಶಾಸಕರು ಕ್ಷೇತ್ರವಾರು ಮಳೆ ಹಾನಿ ಪ್ರದೇಶಕ್ಕೆ ಭೇಟಿ ಪರಿಶೀಲನೆ ನಡೆಸಿಲ್ಲ.
ಕೋಟ್.... ನಗರದಲ್ಲಿನ ರಾಜಕಾಲುವೆ ಹಾಗೂ ಒಳಚರಂಡಿ ದುರಸ್ತಿಗಾಗಿ ಇಂಜನಿಯರ್‌ಗಳ ಸಭೆ ಕರೆಯಲಾಗಿದೆ. ಮಳೆಗಾಲ ಆರಂಭವಾಗುವ ಮುನ್ನವೇ ಸ್ವಚ್ಛಗೊಳಿಸಲಾಗುವುದು.
- ಖಲೀಲ್ ಸಾಬ್, ಆಯುಕ್ತ, ಮಹಾನಗರ ಪಾಲಿಕೆ ಬಳ್ಳಾರಿ.