ಜಿಲ್ಲೆ

ಇಂಧನ ದರದ ಮೇಲೆ ಅಬಕಾರಿ ಸುಂಕ ವಿಧಿಸದಂತೆ ಆಗ್ರಹ: ಬಳ್ಳಾರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಬಳ್ಳಾರಿ: ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫಿಕ್ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಂತರ ಮಾತನಾಡಿದ ಮಹಮ್ಮದ್ ರಫಿಕ್, ಇಂಧನ ಬೆಲೆ ಏರಿಕೆ ಖಂಡಿಸಿ ಕಳೆದ ಐದು ದಿನಗಳಿಂದ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. 2014ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಪೆಟ್ರೋಲ್ ಬೆಲೆ ಕೇವಲ 2-3 ರೂ. ಹೆಚ್ಚಳವಾಗಿದ್ದಕ್ಕೆ ಬಿಜೆಪಿ ತೀವ್ರವಾಗಿ ವಿರೋಧಿಸಿತ್ತು. ಬಿಜೆಪಿ ಸರ್ಕಾರ ಬಂದ ಬಲಿಕ 2014ರಿಂದ ಡೀಸೆಲ್‌ಗೆ 31 ರೂ. ಹಾಗೂ ಪೆಟ್ರೋಲ್‌ಗೆ 36 ರೂ. ಸೆಸ್ ವಿಧಿಸಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಲೂಟಿಗೆ ನಿಂತಿವೆ ಎಂದು ದೂರಿದರು.

ಕೋವಿಡ್‌ನಿಂದ ಎಲ್ಲ ರೀತಿಯ ಕ್ಷೇತ್ರಗಳು ನಷ್ಟ ಆನುಭವಿಸುತ್ತಿವೆ. ಅದರೆ ಅಂಬಾನಿ, ಅದಾನಿಗೆ ಲಾಭ ಹೆಚ್ಚಿದ್ದು, ಇದೆಲ್ಲ ಮೋದಿ ಕೃಪೆಯಾಗಿದೆ. ದೇಶದ ಜನರ ಸಂಕಷ್ಟ ಅರಿತು, ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಕಡಿಮೆಗೊಳಿಸಬೇಕು ಎಂದು ಆಗ್ರಹಿಸಿದರು.