ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಏರ್ಪಡಿಸಿದ್ದ 23ನೇ ವಿಶ್ವ ದೃಷ್ಟಿ ದಿನಾಚರಣೆ ಕಾರ್ಯಕ್ರಮವನ್ನು ಡಿಎಚ್‌ಒ ಡಾ.ಎಚ್.ಎಲ್.ಜನಾರ್ದನ ಉದ್ಘಾಟಿಸಿದರು.  
ಜಿಲ್ಲೆ

ಕಣ್ಣಿನ ಪರೀಕ್ಷೆ ತಪ್ಪದೇ ಮಾಡಿಸಿಕೊಳ್ಳಿ, ಸಾರ್ವಜನಿಕರಿಗೆ ಡಿಎಚ್‌ಒ ಡಾ.ಎಚ್.ಎಲ್.ಜನಾರ್ದನ ಸಲಹೆ

ಬಳ್ಳಾರಿ: ಪ್ರತಿಯೊಬ್ಬರೂ 40 ವರ್ಷ ವಯಸ್ಸಿನ ನಂತರ ತಪ್ಪದೇ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಎಲ್.ಜನಾರ್ದನ ಸಲಹೆ ನೀಡಿದರು.

ಜಿಲ್ಲಾಸ್ಪತ್ರೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ ಕಾರ್ಯಕ್ರಮದಡಿ ‘ನಿಮ್ಮ ಕಣ್ಣುಗಳನ್ನು ಪ್ರೀತಿಸಿ’ ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ 23ನೇ ವಿಶ್ವ ದೃಷ್ಟಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೃಷ್ಟಿದೋಷ, ಕಣ್ಣಿನ ಪೋರೆ, ಗ್ಲಾಕೋಮಾ ಹಾಗೂ ಇತರ ಸಾಮಾನ್ಯ ಕಣ್ಣಿನ ತೊಂದರೆಗಳನ್ನು ಗುರುತಿಸಿಕೊಂಡು, ಕಣ್ಣಿನ ಸಂಭಾವ್ಯ ತೊಂದರೆಗಳನ್ನು ನಿವಾರಿಸಿಕೊಳ್ಳಬೇಕು. ಇದರಿಂದ ಬಹುದಿನಗಳವರೆಗೆ ಕಣ್ಣಿನ ದೋಷವಿಲ್ಲದಂತೆ ರಕ್ಷಣೆ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾಡಳಿತದ ಸಿಎಸ್‌ಆರ್ ಅನುದಾನದ ಮೂಲಕ ಅಂಧತ್ವ ಮುಕ್ತ ಬಳ್ಳಾರಿ ಅಭಿಯಾನ ನಡೆಯುತ್ತಿದೆ. ಈಗಾಗಲೇ 6,50,000 ಜನರ ತಪಾಸಣೆ ಮಾಡಲಾಗಿದೆ. 2,038 ಜನರ ಕಣ್ಣಿನ ಶಸ್ತ್ರ ಚಿಕಿತ್ಸೆ ಮತ್ತು 15,421 ಜನರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಗಿದೆ. ವ್ಯಕ್ತಿಯ ಮರಣದ ನಂತರ ನೇತ್ರದಾನಕ್ಕೆ ಅವಕಾಶವಿದೆ. ರಾಜ್ಯ ಸರ್ಕಾರ ಆರಂಭಿಸಿರುವ ಅಭಿಯಾನದಲ್ಲಿ ಭಾಗವಹಿಸಿ. ವಿಮ್ಸ್‌ನಲ್ಲಿ ನೇತ್ರದಾನ ಮಾಡಿದ ಕಣ್ಣುಗಳನ್ನು ಸಂರಕ್ಷಿಸಿ ಇಡುವ ವ್ಯವಸ್ಥೆಯಿದ್ದು, ನೇತ್ರ ಜೋಡಣೆಯ ಅವಶ್ಯಕತೆ ಇರುವವರಿಗೆ ಶಸ್ತ್ರಚಿಕಿತ್ಸೆ ಮೂಲಕ ಜೋಡಿಸಲಾಗುವುದು ಎಂದರು.

ಜಿಲ್ಲಾ ಅಂಧತ್ವ ನಿವಾರಣಾ ಕಾರ್ಯಕ್ರಮ ಅಧಿಕಾರಿ ಡಾ.ವಿರೇಂದ್ರಕುಮಾರ್ ಮಾತನಾಡಿ, ಕಣ್ಣಿನ ತೊಂದರೆಗಳಲ್ಲಿ ಡಯಾಬಿಟಿಕ್, ರೆಟಿನೋಪತಿ ಮತ್ತು ಗ್ಲಾಕೋಮಾದಂತಹ ಕಾಯಿಲೆಗಳು ಗೊತ್ತಾಗದೇ ಕಣ್ಣಿನ ದೃಷ್ಟಿಗೆ ಹಾನಿ ಮಾಡಬಹುದು. ಆದ್ದರಿಂದ ನಿರಂತರ ಕಣ್ಣಿನ ಪರೀಕ್ಷೆಯನ್ನು ಮಾಡಿಕೊಳ್ಳಬೇಕು ಎಂದರು.

ಹಿರಿಯ ನೇತ್ರ ತಜ್ಞರಾದ ಡಾ.ಆಂಜನೇಯ ಪ್ರಸಾದ್ ಹಾಗೂ ಡಾ.ರೋಹಿಣಿ ಚಾಳೆಕಾರ ಮಾತನಾಡಿದರು. ವೈದ್ಯಧಿಕಾರಿಗಳಾದ ಡಾ.ಮರಿಯಂಬಿ.ವಿ.ಕೆ, ಡಾ.ಪೂರ್ಣಿಮಾ ಕಟ್ಟಿಮನಿ, ಈಶ್ವರ ಎಚ್.ದಾಸಪ್ಪನವರ, ಸಹಾಯಕ ವ್ಯವಸ್ಥಾಪಕ ಗಂಗಾಧರ, ನೇತ್ರಾಧಿಕಾರಿ ಮಂಜುನಾಥ ಚಂದ್ರಶೇಖರ, ಈಶ್ವರಪ್ಪ, ಆಶಾ ಕಾರ್ಯಕರ್ತೆಯರು ಇದ್ದರು.