ಬಳ್ಳಾರಿ : ರಾಮಾಯಣ ಎಂದರೆ ಒಂದು ರೋಮಾಂಚನಕಾರಿ ಗ್ರಂಥ. ಜೀವನದಲ್ಲಿ ಪ್ರತಿಯೊಬ್ಬರು ಒಮ್ಮೆಯಾದರೂ ಓದಬೇಕು ಎಂದು ಶಾಸಕ ನಾರಾ ಭರತರೆಡ್ಡಿ ಹೇಳಿದರು.
ನಗರದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಮಹರ್ಷಿ ವಾಲ್ಮೀಕಿ ಶಾಖಾ ಮಠ ಸ್ಥಾಪಿಸಲಾಗುವುದು. ಇದಕ್ಕಾಗಿ ವೈಯಕ್ತಿಕವಾಗಿ ಎರಡು ಎಕರೆ ಭೂಮಿ ನೀಡುವೆ ಎಂದು ಆಶ್ವಾಸನೆ ನೀಡಿದರು.
ನಗರದ ಎಸ್ಪಿ ವೃತ್ತದಲ್ಲಿ 1.10 ಕೋಟಿ ರೂ. ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿ ಪ್ರತಿಷ್ಠಾಪಿಸಲಾಗುವುದು. ಅಲ್ಲದೆ, ವೃತ್ತವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಖ್ಯಾತ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಅವರ ಹಸ್ತ ವಿನ್ಯಾಸದಲ್ಲಿ ಪುತ್ಥಳಿಯು ಅರಳಲಿದೆ. ಶುಭದಿನದಂದು ರಾಜ್ಯದ ವಿವಿಧ ಭಾಗಗಳಿಂದ ಸಮುದಾಯದ ಜನರನ್ನು ಒಗ್ಗೂಡಿಸಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ರಚಿಸಿದಂತಹ ರಾಮಾಯಣ ಕೃತಿಯು ದೇಶದಲ್ಲಿಯೇ ಸರ್ವಶ್ರೇಷ್ಠ ಗ್ರಂಥವಾಗಿದೆ. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಸಮುದಾಯ ಅಭಿವೃದ್ಧಿ ಹೊಂದಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಕರೆ ನೀಡಿದರು.
ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ಮಹಾಕಾವ್ಯವಾದ ರಾಮಾಯಣದ ಮೂಲಕ ಧರ್ಮಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ ಅವರನ್ನು ಪೂಜಿಸಲಾಗುತ್ತದೆ. ರಾಮಾಯಣ ಕೃತಿಯಲ್ಲಿನ ಪಾತ್ರಧಾರಿಗಳ ಉತ್ತಮ ಅಂಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದರು.
ಬಳಿಕ 2024-25 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ವಿಭಾಗದಲ್ಲಿ ಅತ್ಯುತ್ತಮ ಅಂಕಗಳಿಸಿದ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ಹಾಗೂ ಕೃಷಿ, ತೋಟಗಾರಿಕೆ ಕ್ಷೇತ್ರದಲ್ಲಿ ಸಾಧನೆಗೈದ ರೈತರನ್ನು ಸನ್ಮಾನಿಸಲಾಯಿತು. ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ಹಾಗೂ ಕಲೆ, ಸಾಹಿತ್ಯ-ಸಂಗೀತ ಕ್ಷೇತ್ರದಲ್ಲಿನ ಪರಿಣಿತರನ್ನು ಅಭಿನಂದಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಎಸ್ಪಿ ವೃತ್ತದ ಬಳಿಯ ಮತ್ತು ವಾಲ್ಮೀಕಿ ಭವನದಲ್ಲಿರುವ ವಾಲ್ಮೀಕಿ ಪುತ್ಥಳಿಗೆ ಮಾರ್ಲಾಪಣೆ ಮಾಡಲಾಯಿತು. ಇಲ್ಲಿನ ಎಸ್ಪಿ ವೃತ್ತದಿಂದ ವಾಲ್ಮೀಕಿ ಭವನದ ವೇದಿಕೆ ಕಾರ್ಯಕ್ರಮದವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಮಹರ್ಷಿ ವಾಲ್ಮೀಕಿಯವರ ಪುತ್ಥಳಿ ಒಳಗೊಂಡು ಸಾಗಿಬಂದ ಬೆಳ್ಳಿರಥ ಪ್ರಮುಖ ಆಕರ್ಷಣೆಯಾಗಿತ್ತು. ರಾಮಾಯಣ ಕಥಾಸಂಗ್ರಹದ ಪಾತ್ರ-ವೇಷಧಾರಿಗಳನ್ನೊಳಗೊಂಡ ಕಲಾತಂಡ, ಡೊಳ್ಳು ಕುಣಿತ, ತಾಷೆ ರಾಂಡೋಲ್ ಹಾಗೂ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಿ ಮೆರವಣಿಗೆಗೆ ಇನ್ನಷ್ಟು ಮೆರಗು ನೀಡಿದವು.