ಜಿಲ್ಲೆ

ಬಳ್ಳಾರಿ. ಪ್ರತಿಯೊಬ್ಬರಿಗೂ ಬಿಸಿ ಮುಟ್ಟಿದೆ

ಬಳ್ಳಾರಿ : ಭ್ರಷ್ಟಾಚಾರಕ್ಕೆ ಕಡಿವಾಣ ಹಾಗೂ ಬೆಲೆ ಏರಿಕೆ ನಿಯಂತ್ರಿಸುವುದು ಆಗಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ವರ್ಷ ಕಳೆಯುವ ವೇಳೆಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಸಿ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ, ಸರ್ಕಾರ ಇತ್ತೀಚೆಗೆ ಬಸ್ ದರ ಏರಿಕೆಯಿಂದ ರಾಜ್ಯಾದ್ಯಾಂತ ಸಾರ್ವಜನಿಕರಿಂದ ವ್ಯಾಪಕ ಅಕ್ರೋಶಕ್ಕೆ ಕಾರಣವಾಗಿದೆ. ಹಲವರಿಗೆ ಬಸ್ ದರ ಏರಿಕೆಯಿಂದ ಆರ್ಥಿಕತೆ ಹೊರೆ ಹೆಚ್ಚಿದ್ದು ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ. ಉಚಿತ ಯೋಜನೆಗಳನ್ನು ವಾಪಾಸ್ ಪಡೆದು ಬೆಲೆ ಏರಿಕೆ ತಗ್ಗಿಸಲಿ ಎಂಬ ಆಗ್ರಹ ಕೇಳಿ ಬಂದಿದೆ. ವಿಜಯವಾಣಿ ಪತ್ರಿಕೆಯಿಂದ ಜಿಲ್ಲೆಯಲ್ಲಿ ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಪ್ರತಿಯೊಬ್ಬರಿಗೂ ಬಿಸಿ ಮುಟ್ಟಿದೆ

- ರಾಜ್ಯ ಸರ್ಕಾರ ಬಸ್ ದರ ಏರಿಕೆಯಿಂದ ಪ್ರತಿಯೊಬ್ಬರಿಗೂ ಬಿಸಿ ಮುಟ್ಟಿದೆ. ಪ್ರತಿಯೊಂದು ಉಚಿತವಾಗಿ ನೀಡಿದರೆ ಈಗೇ ಆಗುವುದು. ನಿತ್ಯ ಒಂದಡೆಯಿಂದ ಮತ್ತೊಂದಡೆಯಲ್ಲಿ ಕೆಲಸ ಮಾಡುವವರಿಗೆ ಹೊರೆಯಾಗಲಿದೆ. ಕುಟುಂಬದಿಂದ ದೂರ ಉಳಿದು ಕೆಲಸ ಮಾಡುವವರು ವಾರಕ್ಕೆ ಒಂದು ಬಾರಿ ಬರುವವರು ಇನ್ನೂ ಮುಂದೆ ತಿಂಗಳಿಗೊಮ್ಮೆ ಬರುವಂತೆಯಾಗಿದೆ.

- ಡಾ.ಅರುಣ, ವೈದ್ಯೆ, ಬಳ್ಳಾರಿ.

====

ಖಜಾನೆ ಖಾಲಿ, ಬಡವರ ಜೇಬಿಗೆ ಕನ್ನ.

- ಅಧಿಕಾರದ ಆಸೆಯಿಂದ ರಾಜ್ಯ ಸರ್ಕಾರ ಉಚಿತ ಯೋಜನೆಗಳು ಒದಗಿಸಿ ಖಜಾನೆ ಖಾಲಿ ಮಾಡಿಕೊಂಡಿದ್ದರಿಂದ ಬಡವರ ಜೇಬಿಗೆ ಕನ್ನ ಹಾಕಲು ಹೊರಟಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟದಲ್ಲಿದ್ದಾರೆ. ಬಸ್ ದರ ಏರಿಕೆ ಮಾಡಿ ಆರ್ಥಿಕ ಹೊರೆ ಹೆಚ್ಚಿಸಿದೆ.

- ರಮೇಶ, ಉದ್ಯೋಗಿ, ಬಳ್ಳಾರಿ.

====

ಉಚಿತ ಸೌಲಭ್ಯ ನೀಡುವಲ್ಲಿ ತಾರತಮ್ಯ ಸಲ್ಲದು

- ಸ್ತ್ರೀ ಆದ ನನಗೆ ಉಚಿತ, ನನ್ನ ಮಗನಿಗೆ ಬಸ್ ಟಿಕೆಟ್ ದುಡ್ಡು ಕೊಡಬೇಕು. ಲಿಂಗ ತಾರತಮ್ಯ ಸಲ್ಲದು. ಎಲ್ಲರಿಗೂ ಉಚಿತ ಮಾಡಿ. ಬಸ್ ದರ ಏರಿಕೆ ಮಾಡಿದ್ದು ಸರಿಯಲ್ಲ. ಇದು ನಿತ್ಯ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಬಸ್ ದರ ಏರಿಕೆ ಮಾಡಬಾರದು.

- ಜೋಗಿನ ಶಂಕ್ರಮ್ಮ, ಗೃಹಿಣಿ, ರಾಮಸಾಗರ.

====

ಬಸ್ ದರ ಏರಿಕೆ ಹಿಂಪಡೆಯಿರಿ

- ನಿತ್ಯೋಪಯೋಗಿ, ದಿನಬಳಕೆ ಸಾಮಾನು ದರ ಏರಿಕೆಯ ಬಿಸಿ ಮಧ್ಯೆಯೇ ಬಸ್ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಲೆ ಏರಿಕೆ ನಿತ್ಯ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿ ಪುರುಷರ ಬಸ್ ದರ ಏರಿಸಿದ್ದು ಸರ್ವತಾ ಸೂಕ್ತವಲ್ಲ. ಬಸ್ ದರ ಏರಿಕೆಯನ್ನು ಹಿಂಪಡೆಯಬೇಕು.

- ಎಸ್.ಡಿ.ಬಸವರಾಜ, ಅಂಗಡಿ ಲೆಕ್ಕಿಗ, ಕಂಪ್ಲಿ.

====

ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ

- ರಾಜ್ಯದಲ್ಲಿ ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ಆದರೆ, ಪುರುಷರಿಗೆ ಉಚಿತ ಪ್ರಯಾಣವಿಲ್ಲ. ಅದರಲ್ಲಿಯೂ ಬಸ್ ಪ್ರಯಾಣ ದರ ಏರಿಸಿರುವುದು ಮಧ್ಯಮವರ್ಗದವರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಬಸ್‌ಗಳಲ್ಲಿ ಹಣ ನೀಡಿ ಪ್ರಯಾಣಿಸಿದರೂ ಆಸನಗಳು ದೊರಕದೆ ನಿಂತುಕೊಂಡು ಗ್ರಾಮಗಳಿಗೆ ತಲುಪುವ ಅನಿವಾರ್ಯತೆ.

- ವಿ.ಚಂದ್ರು, ಹೂವಿನಹಡಗಲಿ

====

ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ

- ಸರ್ಕಾರದ ಟಿಕೆಟ್ ಬೆಲೆ ಏರಿಕೆ ಮಹಿಳೆಯರಿಗೆ ಉಚಿತ ಎಂದು ಹೇಳಿ ಪುರುಷರಿಂದ ವಸೂಲಿ ಮಾಡುತ್ತಾ ಕಣ್ಣು ಮುಚ್ಚಾಲೆ ಆಟ ಆಡುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಿದೆ.

-ಬಸವಾಪುರ ಲಕ್ಷ್ಮೀ, ಕುರುಗೋಡು.

====

ಸಾರಿಗೆ ಧರ ಏರಿಸಿರುವ ಕಾಂಗ್ರೆಸ್ ಸರ್ಕಾರ ಒಂದು ಕೈಲಿ ಕೊಟ್ಟು ಇನ್ನೊಂದು ಕೈಲಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಸಾರಿಗೆ, ಕರೆಂಟ್ ಬಿಲ್ ಬೆಲೆ ಏರಿಕೆಯನ್ನು ಮಾಡುವ ಮೂಲಕ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಈಗಾಗಲೇ ನೊಂದಿರುವ ಸಾರ್ವಜನಿಕರನ್ನು ಬೆಲೆ ಏರಿಕೆಯಿಂದ ಮತ್ತಷ್ಟು ಕಾಡುತ್ತಿದೆ. ಪಂಚ ಗ್ಯಾರಂಟಿಗಳನ್ನು ಕೊಟ್ಟು ಅಭಿವೃದ್ದಿಗೆ ಹಣ ಇಲ್ಲದಂತೆ ಮಾಡಿರುವ ಕಾಂಗ್ರೆಸ್ ಸರ್ಕಾರ ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ.

- ಕೆ.ದುರುಗಮ್ಮ , ಸಂಡೂರು.

====

ಬಸ್ ದರ ಏರಿಕೆ ಸರಿಯಲ್ಲ

- ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಇಲ್ಲಿಗೆ ಕೈಬಿಟ್ಟು ಬೆಲೆ ಏರಿಕೆಗೆ ಕಡಿವಾಣ ಹಾಕಿ. ಜನಸಾಮಾನ್ಯರಿಗೆ ತೊಂದರೆಯಾಗದಂತೆ ಜನಸ್ನೇಹಿ ಸರ್ಕಾರಿ ಯಾಗಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿ ಪುರುಷರ ಮೇಲೆ ಹಾಕುವ ಬರೆಯಾಗಿದೆ. ಸರ್ಕಾರಕ್ಕೆ ಎಲ್ಲರೂ ಮತದಾನ ಮಾಡಿದ್ದಾರೆ. ಜನಸಾಮಾನ್ಯರ ಸಮಸ್ಯೆ ಏನೆನ್ನುವುದು ಶಾಸಕರಾಗಲಿ, ಮಂತ್ರಿಗಳಾಗಲಿ ಗಮನಿಸುತ್ತ ಇಲ್ಲ ಇದಕ್ಕೆ ಜವಾಬ್ದಾರಿಯಿಂದ ಉತ್ತರಿಸಲಿ.

-ಜೆ. ಕುಬೇರ, ಸಿರಿಗೇರಿ

====

ಜನರಿಗೆ ಹೊರೆಯಾದ ಸರ್ಕಾರ

ಟಿಕೆಟ್ ದರ ಹೆಚ್ಚಳದಿಂದ ಒಂದು ಕಡೆಯಿಂದ ಬೇರೊಂದು ಕಡೆಗೆ ಕೆಲಸಕ್ಕಾಗಿ ಸಾಗುವ ಕೂಲಿ ಕಾರ್ಮಿಕರಿಗೆ ಮತ್ತು ಬಡತನ ರೇಖೆಗಿಂತ ಕೆಳಗಿರುವ ಸಾಮಾನ್ಯ ವರ್ಗದ ಜನತೆಗೆ ತುಂಬಾ ಹೊರೆಯಾಗುತ್ತಿದೆ.

- ಬಸವರಾಜ, ಹರಪನಹಳ್ಳಿ.

====

ಸಾರ್ವಜನಿಕರಿಗೆ ಮೋಸ

ಮಹಿಳೆಯರಿಗೆ ಫ್ರೀ ಬಸ್ ಟಿಕೆಟ್ ಕೊಡುವ ಅವಶ್ಯಕತೆಯೇ ಇರಲಿಲ್ಲ. ನಿತ್ಯ ಪ್ರಯಾಣಕ್ಕೆ ತುಂಬಾ ಕಷ್ಟ ಆಗ್ತಿದೆ. ಬಸ್ ವ್ಯವಸ್ಥೆ ಕೂಡ ಕಡಿಮೆ ಆಗಿ, ತುಂಬಾ ರಷ್ ಆಗ್ತಿದೆ. ಕಾಲೇಜು, ಆಫೀಸ್‌ಗೆ ಹೋಗುವವರಿಗೆ ತುಂಬಾ ಸಮಸ್ಯೆ ಆಗ್ತಿದೆ. ಇದರ ನಡುವೆ ಬಸ್ ದರ ಹೆಚ್ಚಿಸಿದ್ದು ಸಾರ್ವಜನಿಕರಿಗೆ ಮೋಸ ಮಾಡಿದ್ದಂತೆ.

- ಸಿ.ಎನ್.ನಂದಿನಿ, ಮರಿಯಮ್ಮನಹಳ್ಳಿ.

====

ಒಂದು ಕಡೆ ಕೊಟ್ಟು, ಇನ್ನೊಂದು ಕಡೆ ಕಿತ್ತುಕೊಟ್ಟಂಗೆ

ಹೆಣ್ಣುಮಕ್ಕಳಿಗೆ ಆ ಭಾಗ್ಯ ಕೊಡ್ತೀವಿ, ಈ ಭಾಗ್ಯ ಕೊಡ್ತೀವಿ ಅಂತಾ ಸರ್ಕಾರದವರು ಎಲ್ಲಾ ಮೋಸ ಮಾಡ್ತಿದ್ದಾರೆ. ಒಂದು ಕಡೆಯಿಂದ ಕೊಟ್ಟು, ಇನ್ನೊಂದು ಕಡೆ ಕಿತ್ತುಕೊಟ್ಟಂಗೆ ಮಾಡ್ತಾರೆ. ಹೆಣ್ಣುಮಕ್ಕಳೇನು ಹೊರಗಿನವರಾ? ನಮ್ಮ ಕುಟುಂಬದಲ್ಲೇ ಇರುತ್ತಾರೆ. ಹಾಗಿದ್ಮೇಲೆ, ನಮ್ಮ ಕುಟುಂಬದ ನಾಶವೇ ಇದು. ಇವರು ಮೋಸ ಮಾಡ್ತಾರೆ. ಇದು ಮೋಸದ ಸರ್ಕಾರ ಅಂತಾ ನಮಗೆ ಮೊದಲೇ ಗೊತ್ತಿತ್ತು.

- ಈರೇಶ್, ಕಮಲಾಪುರ