ಬಳ್ಳಾರ : ಭಾರತೀಯ ನಾಗರಿಕನಿಗೆ ಸರ್ಕಾರದ ಹಂತದಲ್ಲಿ ನಡೆಯುವ ಎಲ್ಲ ಮಾಹಿತಿಗಳ ಪಡೆಯುವ ಹಕ್ಕನ್ನು ನೀಡಲಾಗಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ಮಾಹಿತಿ ಆಯುಕ್ತ ರವೀಂದ್ರ ಗುರುನಾಥ ಧಾಕಪ್ಪ ಹೇಳಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ ಹಾಗೂ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಯ ಸಹಯೋಗದೊಂದಿಗೆ ಗುರುವಾರ ನಡೆದ ಮಾಹಿತಿ ಹಕ್ಕು ಆಯೋಗದ ಆಯುಕ್ತರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾಹಿತಿ ಹಕ್ಕನ್ನು ಪಡೆಯುವ ಸಂದರ್ಭದಲ್ಲಿ ಸರ್ಕಾರದ ಆಡಳಿತದ ದಕ್ಷತೆಗೆ ಧಕ್ಕೆಯಾಗದಂತೆ ಮಾಹಿತಿ ಹಕ್ಕು ಅಧಿನಿಯಮವನ್ನು ಎರಡರ ಸಮತೋಲನವನ್ನು ಕಾಪಾಡಲು ರೂಪಿಸಲಾಗಿದೆ. ಆದರೆ, ಕಾನೂನಿನ ತಿಳುವಳಿಕೆ ಕೊರತೆ ಮತ್ತು ಅನಗತ್ಯವಾದ ಆತಂಕಗಳಿಂದಾಗಿ ಮಾಹಿತಿ ನೀಡುವ ಅಧಿಕಾರಿಗಳು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಗೊಂದಲಗಳನ್ನು ನಿವಾರಿಸಲು ಇರುವ ಪರಿಹಾರ ಮಾರ್ಗವೆಂದರೆ ಮಾಹಿತಿ ಹಕ್ಕು ಅಧಿನಿಯಮದ ಬಗೆಗೆ ಕೂಲಂಕುಶವಾಗಿ ತಿಳಿದುಕೊಳ್ಳುವುದಾಗಿದೆ. ಈ ನಿಟ್ಟಿನಲ್ಲಿ ಸಂವಾದ ಕಾರ್ಯಕ್ರಮವು ಮಾಹಿತಿ ಹಕ್ಕು ಅಧಿನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಿದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಐ.ಹೊನ್ನೂರಾಲಿ ಮಾತನಾಡಿ, ಅಪ್ರಜ್ಞಾಪೂರ್ವಕವಾಗಿ ಅಧಿಕಾರಿಗಳಿಂದ ಆಗಿರುವ ಆಡಳಿತಾತ್ಮಕ ಲೋಪಗಳಿಂದಾಗಿ ದಂಡನೆ ಮತ್ತು ಶಿಕ್ಷೆಗೆ ಗುರಿಯಾಗುವ ಆತಂಕ ಆಡಳಿತ ಅಧಿಕಾರಿಗಳಿಗಿದೆ. ಈ ನಿಟ್ಟಿನಲ್ಲಿ ರಾಜ್ಯ ಮಾಹಿತಿ ಆಯೋಗವು ಏರ್ಪಡಿಸಿರುವ ಸಂವಾದ ಕಾರ್ಯಕ್ರಮವು ಆತಂಕಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ. ಇಂತಹ ಸಂವಾದಗಳು ಹೆಚ್ಚೆಚ್ಚು ನಡೆಯುವುದರಿಂದ ಆಡಳಿತ ಸುಗಮವಾಗಿ ನಿರ್ವಹಿಸಲು ಸಹಕಾರಿಯಾಗುತ್ತದೆ ಎಂದರು.
ಸಂವಾದದಲ್ಲಿ ಹೊಸಪೇಟೆ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ವಿವಿಧ ಕಾಲೇಜಿನ ಪ್ರಾಂಶುಪಾಲರು ಭಾಗವಹಿಸಿದ್ದರು.