ಜಿಲ್ಲೆ

ಬಳ್ಳಾರಿ, ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಹವಾಮಾನ ವೈಪರಿತ್ಯದಿಂದ ಜಾಗತಿಕ ತಾಪಮಾನ ಹೆಚ್ಚುತ್ತಿದ್ದು, ಪರಿಸರದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಸರ್ಕಾರಿ (ಮಾ.ಪು) ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ , ಜಿಲ್ಲಾ ಅರಣ್ಯ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ವತಿಯಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಂಸ್ಥಾಪನೆಗೊಂಡು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆದ್ದರಿಂದ, ದೇಶದ ನಾನಾ ಕಡೆ ಭೂ ಕುಸಿತ ಹಾಗೂ ಪ್ರವಾಹ ಉಂಟಾಗುತ್ತಿದೆ. ಅರಣ್ಯದಲ್ಲಿನ ವನ್ಯಜೀವಿಗಳು ಪರಿಸರ ಸಮತೋಲನ ಕಾಪಾಡಲಿದ್ದು, ಅವುಗಳನ್ನು ಸಂರಕ್ಷಿಸುವುದು ನಮ್ಮ ಎಲ್ಲರ ಅದ್ಯ ಕರ್ತವ್ಯವಾಗಿದೆ. ಪರಿಸರಕ್ಕೆ ಮನುಷ್ಯನ ಅಗತ್ಯವಿಲ್ಲ, ಪ್ರಕೃತಿ ಪರಿಸರ ನಾಶವಾದರೆ ಇಡೀ ಮಾನವಕುಲವೇ ನಾಶವಾಗುತ್ತದೆ. ಪ್ರಕೃತಿ ಪರಿಸರ ಉಳಿದರೆ ಮಾತ್ರ ನಾವು ಮತ್ತು ಮುಂದಿನ ಪೀಳಿಗೆ ಬದುಕಲು ಸಾಧ್ಯ. ಈಗಾಗಲೇ 11 ಕೋಟಿ ಸಸಿಗಳನ್ನು ರಾಜ್ಯಾದ್ಯಂತ ನೆಡಲಾಗಿದೆ.

ರಾಜ್ಯದಲ್ಲಿ ಸುಮಾರು ಶೇ. 21ರಷ್ಟು ಅರಣ್ಯ ಪ್ರದೇಶವಿದೆ. ಜಾಗತಿಕ ತಜ್ಞರ ಪ್ರಕಾರ ಭೂಭಾಗದ ಶೇ. 33ರಷ್ಟು ಅರಣ್ಯ ಪ್ರದೇಶ ಒಳಗೊಂಡಿರಬೇಕು. ಪ್ರಕೃತಿ ಪರಿಸರ ಆರೋಗ್ಯವಾಗಿರಬೇಕೆಂದರೆ ಶೇ. 33 ರಷ್ಟು ಅರಣ್ಯ ಪ್ರದೇಶ ಇರಬೇಕು ಎಂದರು.

ರಾಜ್ಯದಲ್ಲಿ 5 ರಾಷ್ಟ್ರೀಯ ಉದ್ಯಾನವನ, 5 ಹುಲಿ ಸಂರಕ್ಷಿತ ಪ್ರದೇಶ, 37 ವನ್ಯಜೀವಿ ಧಾಮ, 19 ವನ್ಯ ಜೀವಿ ಮೀಸಲು ಕ್ಷೇತ್ರಗಳಿವೆ. ದೇಶದಲ್ಲಿ ಆನೆಗಳ ಸಂಖ್ಯೆಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಒಟ್ಟು 6,395 ಆನೆಗಳಿವೆ. 563 ಹುಲಿಗಳಿದ್ದು, ದೇಶದಲ್ಲಿಯೇ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ ಎಂದು ವಿವರಿಸಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ ಮಾತನಾಡಿ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಕೈಜೋಡಿಸಿದರೆ ಅದು ಆಗದ ಕೆಲಸವೇನಲ್ಲ ಎಂದು ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿ ಬಳ್ಳಾರಿ-ರಾಯಚೂರು ಜಿಲ್ಲೆಗಳು ಮಾಲಿನ್ಯ ಮುಕ್ತವಾಗುವತ್ತ ಹೆಜ್ಜೆ ಇಡಬೇಕು ಎಂದರು.

ನಿಗಮದ ವತಿಯಿಂದ ಜಿಲ್ಲೆಯಲ್ಲಿ ಐದು ನಿರಂತರ ವಾಯು ಗುಣಮಟ್ಟ ಮಾಪನ ಕೇಂದ್ರವನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಈಗಾಗಲೇ ನಾಲ್ಕು ಕೇಂದ್ರಗಳಿಗೆ ಜಾಗ ಹುಡುಕಿ ಡಿಪಿಆರ್ ಹಂತದಲ್ಲಿದೆ. ಇನ್ನೊಂದು ಕಡೆ ಜಾಗ ಹುಡುಕುವ ಪ್ರಕ್ರಿಯೆಯಲ್ಲಿದೆ. ಜಿಲ್ಲೆಯ 65 ಜೀನ್ಸ್ ಘಟಕಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಂಸ್ಕರಿಸದೇ ನೇರವಾಗಿ ಹಳ್ಳಕ್ಕೆ ಬೀಡುತ್ತಿದ್ದುದರಿಂದ 53 ಘಟಕಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿದೆ ಎಂದರು.

ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ : ಜಿಲ್ಲಾ ಮಟ್ಟದಲ್ಲಿ ಪರಿಸರ ಉಳಿವಿಗಾಗಿ ಹಾಗು ಮಾಲಿನ್ಯ ನಿಯಂತ್ರಣಕ್ಕಾಗಿ ಎಲೆ ಮರೆಯ ಕಾಯಿಗಳಂತೆ ಕೆಲಸ ಮಾಡಿರುವ ಮಹನೀಯರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪರಿಸರ ಸಂರಕ್ಷಣೆ ಕುರಿತು ವಿವಿಧ ಶಾಲಾ-ಕಾಲೇಜುಗಳಲ್ಲಿ ಏರ್ಪಡಿಸಿದ್ದ ಪ್ರಬಂಧ, ಗೋಡೆಬಹರ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.

ಶಿಷ್ಠಾಚಾರ ಉಲ್ಲಂಘನೆ : ಸುವರ್ಣ ಮಹೋತ್ಸವ ಕಾರ್ಯಕ್ರಮ ಬೆಳಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದು, ಮಧ್ಯಾಹ್ನ 12.30ಕ್ಕೆ ಪ್ರಾರಂಭವಾಯಿತು. ಜಿಲ್ಲೆಯ ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಮ್, ಸಂಸದ ತುಕಾರಾಮ್ ಉಪಸ್ಥಿತಿ ಇದ್ದರು. ಇನ್ನುಳಿದ ಶಾಸಕರಾದ ಬಿ.ನಾಗೇಂದ್ರ, ಜೆ.ಎನ್.ಗಣೇಶ್, ಬಿ.ಎಂ.ನಾಗರಾಜ, ನಾರಾಭರತರೆಡ್ಡಿ ಹಾಗೂ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ವೈ.ಸತೀಶ್ ಕೂಡ ಭಾಗಿಯಾಗಲಿಲ್ಲ. ಅಲ್ಲದೆ, ಕಾರ್ಯಕ್ರಮದ ಅಧ್ಯಕ್ಷತೆ ಶಾಸಕ ನಾರಾ ಭರತರೆಡ್ಡಿ ವಹಿಸಲಾಗಿತ್ತು. ರಾಜ್ಯ ಸರ್ಕಾರದ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದ ವೇದಿಕೆಯಾಗಿತ್ತು. ಕಾಂಗ್ರೆಸ್ ಪಕ್ಷದ ಮುಖಂಡರು ವೇದಿಕೆಯಲ್ಲಿ ಆಸೀನರಾಗಿದ್ದರು. ವೇದಿಕೆಯಲ್ಲಿದ್ದ ಡಿಸಿ ನಾಗೇಂದ್ರ ಪ್ರಸಾದ್ ಶಿಷ್ಠಾಚಾರ ಉಲ್ಲಂೆನಯಾದರೂ ಕೂಡ ಯಾರನ್ನು ಕೆಳಗ ಇಳಿಸುವಕ್ಕೆ ಮುಂದಾಗದೆ ಸುಮ್ಮನೆ ಕೂತರು. ಸಂಸದರ ಭಾಷಣದ ವೇಳೆ ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಮಹಿಳಾ ಮುಖಂಡರೊಬ್ಬರು ಅರಣ್ಯ ಸಚಿವರನ್ನು ಸನ್ಮಾನಿಸಿದ್ದು ಕೆಂಗಣ್ಣಿಗೆ ಗುರಿಯಾದರು. ಮಹೋತ್ಸವಕ್ಕೆ ಜನರು ಬಾರದೆ ಇದ್ದರಿಂದ ಸಮೀಪದ ಎಸ್‌ಎಸ್‌ಎ ಕಾಲೇಜಿನ ವಿದ್ಯಾರ್ಥಿಗಳನ್ನು ಕರೆತರಲಾಗಿತ್ತು. ಮಧ್ಯಾಹ್ನ ಆಗುತ್ತಿದ್ದಂತೆ ವಿದ್ಯಾರ್ಥಿಗಳು ಹೊರನಡೆದರು. ಸಚಿವ ಈಶ್ವರ ಖಂಡ್ರೆ ಭಾಷಣದ ವೇಳೆ ಬಹುತೇಕ ಖುರ್ಚಿಗಳು ಖಾಲಿಯಾಗಿದ್ದವು. ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ವಿದ್ಯಾರ್ಥಿಗಳು ಕೇಕೆ ಹಾಕುವುದು ಎಲ್ಲರ ಗಮನ ಸೆಳೆಯಿತು.