ಜಿಲ್ಲೆ

ಮಳೆಯಿಂದ ತಗ್ಗಿದ ವಿದ್ಯುತ್ ಬೇಡಿಕೆ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಾಜ್ಯದ ಶಾಖೋತ್ಪನ್ನ ವಿದ್ಯುತ್ ಘಟಕಗಳಿಗೆ ವಿದ್ಯುತ್ ಉತ್ಪಾದನೆ ಬೇಡಿಕೆ ತಗ್ಗಿದೆ. ಅಲ್ಲದೆ, ಎಲ್ಲ ಜಲಾಶಯಗಳಿಗೆ ಮಳೆಯಿಂದ ಜೀವಕಳೆ ಜತೆಗೆ ಜಲವಿದ್ಯುತ್ ಘಟಕಗಳಿಗೂ ಪುನಶ್ಚೇತನ ದೊರೆತಿದೆ.

ಕಳೆದ ಕೆಲ ತಿಂಗಳಿಂದ ಏರುತ್ತಿರುವ ತಾಪಕ್ಕೆ ಜನರು ಹೈರಾಣಾಗಿದ್ದರು. ಮನೆ ಹಾಗೂ ಕಚೇರಿಗಳಲ್ಲಿ ಫ್ಯಾನ್, ಏರ್‌ಕೂಲರ್, ಎಸಿಗಳ ಮೂಲಕ ತಣ್ಣನೆಯ ಗಾಳಿ ಪಡೆಯಲು ಮುಂದಾಗಿದ್ದರಿಂದ ವಿದ್ಯುತ್ ಘಟಕಗಳ ಬೇಡಿಕೆಯೂ ಹೆಚ್ಚಿತ್ತು. ಸದ್ಯ, ಮಳೆಯಿಂದ ಬಳ್ಳಾರಿಯ ಬಿಟಿಪಿಎಸ್‌ನ 1700 ಮೆಗಾವಾಟ್ ಸಾಮರ್ಥ್ಯದ ಮೂರು ಘಟಕಗಳ ಪೈಕಿ ಎರಡು ಘಟಕಗಳಿಂದ 238 ಮೆವಾ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಒಂದು ಘಟಕಕ್ಕೆ ನಿರ್ವಹಣೆಯ ಕಾರಣದಿಂದ ವಿಶ್ರಾಂತಿ ನೀಡಿ ಸಣ್ಣಪುಟ್ಟ ರಿಪೇರಿ ಕೈಗೊಳ್ಳಲಾಗಿದೆ. ರಾಯಚೂರಿನ ಆರ್‌ಟಿಪಿಎಸ್ ಆರು ಯೂನಿಟ್‌ಗಳ ಪೈಕಿ ಎರಡು ಯೂನಿಟ್‌ಗಳಿಂದ 265 ಮೆಗಾವಾಟ್ (1720 ಮೆವಾ ಸಾಮರ್ಥ್ಯ) ವಿದ್ಯುತ್ ಉತ್ಪಾದನೆ ನಡೆದಿದ್ದು, ನಾಲ್ಕು ಯೂನಿಟ್‌ಗಳಿಗೆ ವಿಶ್ರಾಂತಿ ನೀಡಲಾಗಿದೆ. 1600 ಮೆವಾ ಸಾಮರ್ಥ್ಯದ ಯರಮಸ್‌ನ ಮೂರು ಯೂನಿಟ್‌ಗಳಿಗೆ ವಿಶ್ರಾಂತಿ ನೀಡಲಾಗಿದೆ.

ರಾಜ್ಯದ ಜಲ ವಿದ್ಯುತ್ ಘಟಕಗಳಲ್ಲಿ ಸದ್ಯ ನಿರಂತರ ವಿದ್ಯುತ್ ಉತ್ಪಾದನೆ ನಡೆದಿದೆ. ಶರಾವತಿ - 439 ಮೆವಾ ( 1035 ಸಾಮರ್ಥ್ಯ), ನಾಗಝರಿ - 198 ಮೆವಾ (900 ಸಾಮರ್ಥ್ಯ), ವರಾಹಿ - 453 ಮೆವಾ (460 ಸಾಮರ್ಥ್ಯ), ಕೊಡಸಳ್ಳಿ -112 ಮೆವಾ (120 ಸಾಮಥರ್‌ಯ), ಖದ್ರಾ - 143 ಮೆವಾ (150 ಸಾಮರ್ಥ್ಯ), ಜಿಂದಾಲ್ 0 ಮೆವಾ (1460 ಸಾಮರ್ಥ್ಯ), ಯುಪಿಸಿಎಲ್ 307 ಮೆವಾ (1200 ಸಾಮರ್ಥ್ಯ) ಗೇರುಸೊಪ್ಪ, ಜೋಗ , ಸೂಪಾ ಶಿಂಪಾ ಸೇರಿದಂತೆ ರಾಜ್ಯದ ವಿವಿಧ ಜಲವಿದ್ಯುತ್ ಘಟಕಗಳಲ್ಲಿ ನಿರಂತರ ವಿದ್ಯುತ್ ಉತ್ಪಾದನೆ ನಡೆಯುತ್ತಿದೆ. ಆದರೆ, ನಿರಂತರ ಮಳೆಯಿಂದ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಕಳೆದ ಕೆಲ ತಿಂಗಳ ಹಿಂದೆ ವಿದ್ಯುತ್ ಬೇಡಿಕೆಯಿಂದ ಬಹುಪಾಲು ಉಷ್ಣ ವಿದ್ಯುತ್ ಸ್ಥಾವರದ ಘಟಕಗಳು ಇದೀಗ ವಿಶ್ರಾಂತಿಯಲ್ಲಿವೆ. ಕಳೆದ ಎರಡ್ಮೂರು ವರ್ಷದಿಂದ ಮಹಾರಾಷ್ಟ್ರ, ಅಹಮಬಾದ್, ಛತ್ತಿಸ್‌ಗಡ್ ಸೇರಿದಂತೆ ನೆರೆಯ ರಾಜ್ಯಗಳಿಂದ ವಿದ್ಯುತ್ ಅಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಕಳೆದ ಎರಡು ರಾಜ್ಯದಲ್ಲಿ ನಿರೀಕ್ಷೆ ಮೀರಿ ಸುರಿಯುತ್ತಿರುವ ಮಳೆಯಿಂದ ರಾಜ್ಯ ಸರ್ಕಾರವೇ ಬೇರೆ ಬೇರೆ ರಾಜ್ಯಗಳಿಗೆ ಮರು ರಫ್ತು ಮಾಡಲಾಗುತ್ತಿದೆ. ಇದರಿಂದ ರಾಜ್ಯದ ಆರ್ಥಿಕತೆಗೂ ಹೊರೆ ತಗ್ಗಿದೆ. ರಾಜ್ಯದಲ್ಲಿ ಶಾಖೋತ್ಪನ ಹಾಗೂ ಜಲ ವಿದ್ಯುತ್ ಘಟಕಗಳಿಂದ ಒಟ್ಟಾರೆ 11706 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯವಿದೆ. ಸದ್ಯ, 3139 ಮೆಗಾ ವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

ಬಾಕ್ಸ್ : ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ವಿದ್ಯುತ್ ಉತ್ಪಾದಿಸಿದ ಕೆಲ ಘಟಕಗಳಲ್ಲಿ ರಿಪೇರಿ ಕಾರ್ಯ ಕೈಗೊಳ್ಳಲಾಗಿದ್ದು 90 ದಿನಗಳ ಒಳಗೆ ಪೂರ್ಣಗೊಳಿಸುವಂತೆ ಸರ್ಕಾರದಿಂದ ಸೂಚಿಸಲಾಗಿದೆ. ಆದ್ದರಿಂದ, ಎಲ್ಲ ಶಾಖೋತ್ಪನ್ನ ಘಟಕಗಳಲ್ಲಿ ಒಂದಲ್ಲ ಒಂದು ಯೂನಿಟ್ ನಿರ್ವಹಣೆ ನೆಪದಲ್ಲಿ ದುರಸ್ತಿಗೆ ಮುಂದಾಗಿದೆ ಎಂಬುದಾಗಿ ಬಿಟಿಪಿಎಸ್ ಅಧಿಕಾರಿ ತಿಳಿಸಿದರು.

ಕೋಟ್... ರಾಜ್ಯದಲ್ಲಿ ಮಳೆಯಿಂದ ಶಾಖೋತ್ಪನ ಘಟಕಗಳಿಗೆ ವಿದ್ಯುತ್ ಉತ್ಪಾದನೆ ಬೇಡಿಕೆ ತಗ್ಗಿದೆ. ಯೂನಿಟ್‌ಗಳಲ್ಲಿ ಸಣ್ಣಪುಟ್ಟ ರಿಪೇರಿ ಕೈಗೊಳ್ಳಲಾಗಿದೆ.

- ಉದಯ ನಾಯ್ಕ, ಎನ್. ಬಿಟಿಪಿಎಸ್ ಕಾರ್ಯನಿವಾರ್ಹಕ ನಿರ್ದೇಶಕ, ಬಳ್ಳಾರಿ.