ಜಿಲ್ಲೆ

ಗ್ಯಾರಂಟಿಗಳಿಂದ ಆರ್ಥಿಕತೆ ಸುಧಾರಣೆ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಬಡವರ ಹಾಗೂ ಮಧ್ಯಮ ವರ್ಗದ ಜನರ ಆರ್ಥಿಕ ಮಟ್ಟವನ್ನು ಸುಧಾರಿಸಲು ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದಲ್ಲಿ ಆರ್ಥಿಕ ಶಕ್ತಿ ತುಂಬಿದ್ದಾರೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ ಹೇಳಿದರು.

ಇಲ್ಲಿನ ಡಿಸಿ ಕಚೇರಿ ಅವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಎಲ್‌ಇಡಿ ವಾಹನ ಹಾಗೂ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ ಸರ್ಕಾರದ ಪ್ರಮುಖ ಐದು ಗ್ಯಾರಂಟಿ ಯೋಜನೆಗಳನ್ನು ಶೇ.98 ರಷ್ಟು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಶೇ.100 ರಷ್ಟು ಅನುಷ್ಠಾನಗೊಳಿಸಲು ಯೋಜನೆಗಳ ಅರಿವು ಅಗತ್ಯವಾಗಿದೆ. ಹಾಗಾಗಿ ಎಲ್‌ಇಡಿ ವಾಹನವು ಬೀದಿ ನಾಟಕ ಕಾರ್ಯಕ್ರಮ ಆಯೋಜಿಸುವ ಕಲಾವಿದರ ತಂಡದೊಂದಿಗೆ ಜಿಲ್ಲೆಯ ಆಯ್ದ 20 ಗ್ರಾಮಗಳಲ್ಲಿ ಸಂಚರಿಸಿ ಗ್ರಾಮೀಣ ಭಾಗದ ಜನರಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದು ಮಾಹಿತಿ ನೀಡಿದರು.

ಗೃಹಲಕ್ಷ್ಮಿ ಯೋಜನೆಯ ಕಳೆದ 16 ತಿಂಗಳ ಎಲ್ಲ ಕಂತಿನ ಹಣವನ್ನು ಗೃಹಲಕ್ಷ್ಮಿಯರ ಖಾತೆಗೆ ಜಮೆ ಮಾಡಲಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕಳೆದ 3 ತಿಂಗಳ ಗೃಹಲಕ್ಷಿ ಹಣ ಬಂದಿಲ್ಲ. ಈಗಾಗಲೇ ಸಿಎಂ ಹಾಗೂ ಇಲಾಖಾ ಸಚಿವರು ಮುಂದಿನ ದಿನಗಳಲ್ಲಿ ಹಣ ಪಾವತಿಸುವ ಕುರಿತು ತಿಳಿಸಿದ್ದಾರೆ ಎಂದರು.