ಜಿಲ್ಲೆ

ತಿರಸ್ಕಾರ ಮನೋಭಾವ ಕಾಣದಿರಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಇತ್ತೀಚಿನ ದಿನಗಳಲ್ಲಿ ಹಿರಿಯರನ್ನು ಕಿರಿಯರು ತಿರಸ್ಕಾರ ಮನೋಭಾವದಿಂದ ಕಾಣುತ್ತಿರುವುದು ವಿಪರ್ಯಾಸ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಹೇಳಿದರು.

ಇಲ್ಲಿನ ಬಿಮ್ಸ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಯುವಜನ ಸೇವಾ ಕ್ರೀಡಾ ಇಲಾಖೆ ಹಾಗೂ ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ಹಿರಿಯ ನಾಗರಿಕರ ದಿನಾಚರಣೆ 2025 ರ ಅಂಗವಾಗಿ ಹಿರಿಯ ನಾಗರಿಕರಿಗಾಗಿ ಮಂಗಳವಾರ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯರ ಮಾತಿಗೆ ಉತ್ತೇಜನ ನೀಡಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಕುಟುಂಬ ಚೆನ್ನಾಗಿರುತ್ತದೆ ಎಂದು ಸಲಹೆ ನೀಡಿದರು.

ಪ್ರತಿಯೊಬ್ಬರು ಜೀವನದ ಮೂರು ಹಂತಗಳಾದ ಬಾಲ್ಯ, ಯೌವ್ವನ, ಮುಪ್ಪು ದಾಟಬೇಕು. ಮಕ್ಕಳಿಗೆ ತಪ್ಪು ಸರಿ ಕುರಿತು ಅರಿವಿರುವುದಿಲ್ಲ. ಇದೇ ರೀತಿ ಹಿರಿಯ ನಾಗರಿಕರು ವಯಸ್ಸಾದಂತೆ ಮಕ್ಕಳಂತಾಗುತ್ತಾರೆ. ಆದ್ದರಿಂದ, ಪ್ರತಿಯೊಬ್ಬರು ಹಿರಿಯ ನಾಗರಿಕರನ್ನು ಗೌರವಿಸಬೇಕು ಎಂದು ಕಿವಿಮಾತು ಹೇಳಿದರು.

ವಯಸ್ಸಾಗುತ್ತಿದ್ದಂತೆ ಅರಳು ಮರಳು ಎನ್ನುವ ಮಾತಿದೆ. ಆದರೆ ಅವರಲ್ಲಿನ ಕಲೆ ಪ್ರತಿಭೆ ನೋಡಿದರೆ ಆಶ್ಚರ್ಯವಾಗುತ್ತದೆ. ಈ ರೀತಿಯ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಇಳಿವಯಸ್ಸಿನಲ್ಲಿ ಜೀವಗಳಿಗೆ ಉಲ್ಲಾಸ ತುಂಬಬೇಕಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯ್ಕ ಮಾತನಾಡಿ, ಹಿರಿಯ ನಾಗರಿಕರ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಜಿಲ್ಲಾಡಳಿತ ನಮ್ಮನ್ನೆಲ್ಲಾ ವರ್ಷಕ್ಕೊಮ್ಮೆ ಬೆಸೆಯುತ್ತದೆ. ವರ್ಷಪೂರ್ತಿ ನಡೆದ ದುಃಖ ದುಮ್ಮಾನಗಳನ್ನು ನಾವು ಹಂಚಿಕೊಳ್ಳುತ್ತೇವೆ. ಕ್ರೀಡೆಗಳಲ್ಲಿ ಗೆಲುವು ಸೋಲು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಆರೋಗ್ಯವಾಗಿರಬೇಕು ಎಂದರೆ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಉತ್ಸಾಹದಿಂದ ಇರಬೇಕು ಎಂದರು.

ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಅಂದಾಜು 200 ಕ್ಕೂ ಹೆಚ್ಚು ಮಂದಿ ಭಾಗಿಯಾಗುವ ಮೂಲಕ ತಮ್ಮ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ಸಾಹವನ್ನು ತೋರಿಸಿದರು.

ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಮ್ಯೂಸಿಕಲ್ ಚೇರ್, ಬಿರುಸಿನ ನಡೆಗೆ ಹಾಗೂ ಬಕೆಟ್‌ನಲ್ಲಿ ಬಾಲ್ ಎಸೆಯುವ ಕ್ರೀಡೆಗಳನ್ನು ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಾದ ಗಾಯನ ಸ್ಪರ್ಧೆ ಹಾಗೂ ಏಕ ಪಾತ್ರ ಅಭಿನಯವನ್ನು ಏರ್ಪಡಿಸಲಾಗಿತ್ತು. ಚೆಂಗಾರೆಡ್ಡಿ ವೃದ್ಧಾಶ್ರಮದ ಆಡಳಿತಾಧಿಕಾರಿ ಗುರುಮೂರ್ತಿ, ಸಂಗನಕಲ್ಲು ಆದರ್ಶ ವೃದ್ಧಾಶ್ರಮದ ಅಧ್ಯಕ್ಷ ವೆಂಕೋಬಪ್ಪ, ಸಿರಗುಪ್ಪ ಭೀಮಾ ವಿದ್ಯಾ ಸಂಸ್ಥೆಯ ಮಹೇಶ್ ಕುಮಾರ್, ಬಳ್ಳಾರಿ ಅನುಗ್ರಹ ವಿದ್ಯಾಸಂಸ್ಥೆಯ ಸಿಸ್ಟರ್ ಪ್ರಜ್ಞ ಇದ್ದರು.