ಜಿಲ್ಲೆ

ಮಲೇರಿಯಾ ಬಗ್ಗೆ ಭಯಬೇಡ ಎಚ್ಚರವಿರಲಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ಸಾರ್ವಜನಿಕರು ಯಾವುದೇ ಜ್ವರವಿರಲಿ, ಮೊದಲು ರಕ್ತಲೇಪನ ಪರೀಕ್ಷೆ ಮಾಡಿಸಬೇಕು. ಶೂನ್ಯ ಮಲೇರಿಯಾ ಗುರಿ ತಲುಪಲು ಮತ್ತು ರೋಗ ತಡೆಗಟ್ಟಲು ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಡಿಎಚ್‌ಒ ಡಾ.ವೈ.ರಮೇಶ್ ಬಾಬು ಹೇಳಿದರು.

ನಗರದ ಡಿಎಚ್‌ಒ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾ ಕಚೇರಿ ವತಿಯಿಂದ ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ, ಮರು ಹೂಡಿಕೆ ಮಾಡಿ, ಮರು ಕಲ್ಪನೆ ಮಾಡಿ, ಮರು ಉತ್ತೇಜನ ನೀಡೋಣ ಎಂಬ ಘೋಷವಾಕ್ಯದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಮಲೇರಿಯಾ ರೋಗಕ್ಕೆ ಉಚಿತವಾಗಿ ರಕ್ತ ಪರೀಕ್ಷೆ ಹಾಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಇದರ ಸದುಯೋಗಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ ಮಾತನಾಡಿ, ಮಲೇರಿಯಾ ಪ್ರಕರಣಗಳು ಕಂಡು ಬಂದ ಸಂದರ್ಭದಲ್ಲಿ ಮನೆಯ ಸುತ್ತಮುತ್ತಲು ಆರೋಗ್ಯ ಇಲಾಖೆಯಿಂದ ಕೈಗೊಳ್ಳುವ ಕೀಟನಾಶಕ ಸಿಂಪರಣೆಗೆ ಸಾರ್ವಜನಿಕರು ಅವಕಾಶ ಸಹಕರಿಸಬೇಕು. ಸ್ವಯಂ ರಕ್ಷಣಾ ಕ್ರಮಗಳಾದ ಮಲಗುವಾಗ ಸೊಳ್ಳೆ ಪರದೆ ಬಳಕೆ ಮಾಡಬೇಕು. ಕಿಟಕಿಗಳಿಗೆ ಸೊಳ್ಳೆಗಳು ನುಸುಳದಂತೆ ಜಾಲರಿ ಅಳವಡಿಸುವುದು. ಆರೋಗ್ಯ ಇಲಾಖೆಯಿಂದ ನೀಡಲ್ಪಡುವ ಲಾರ್ವಹಾರಿ ಗಪ್ಪಿ ಮತ್ತು ಗಂಬೂಷಿಯಾ ಮೀನುಗಳನ್ನು ಶಾಶ್ವತವಾಗಿ ನೀರು ನಿಲ್ಲುವ ಸ್ಥಳಗಳಲ್ಲಿ ಬಿಡಲು ಉಚಿತವಾಗಿ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಜಾಗೃತಿ ಜಾಥವು ನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ವಾರ್ಡ್‌ಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಮಲೇರಿಯಾ ರೋಗದ ಕುರಿತು ಮಾಹಿತಿ ನೀಡಲಾಯಿತು.