ಬಳ್ಳಾರಿ : ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿಯ ಬಂಡಾಯದ ಬಾವುಟ ಹಾರಿಸಿದ್ದ ಕೆ.ಎಸ್.ದಿವಾಕರ್‌ಗೆ ಪಕ್ಷದ ರಾಜ್ಯ ಕಾರ್ಯದರ್ಶಿ ಹುದ್ದೆ ಕೊಡಿಸುವ ಮೂಲಕ ಮಾಜಿ ಸಚಿವ, ಶಾಸಕ ಜಿ.ಜನಾರ್ಧನರೆಡ್ಡಿ ಪಕ್ಷಕ್ಕೆ ತಟ್ಟಿದ್ದ ಬಂಡಾಯದ ಬಿಸಿಯನ್ನು ಶಮನಗೊಳಿಸಿದ್ದಾರೆ.
ನಗರದ ತಮ್ಮ ನಿವಾಸದ ಬಳಿಯ ಕಚೇರಿಯಲ್ಲಿ ಕೆ.ಎಸ್.ದಿವಾಕರ್ ಮತ್ತವರ ಬೆಂಬಲಿಗರೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ದೂರವಾಣಿ ಕರೆ ಮಾಡಿ, ಕೆ.ಎಸ್.ದಿವಾಕರ್ ಅವರನ್ನು ಪಕ್ಷದ ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಪಕ್ಷದಲ್ಲಿ ನಾನು ಮತ್ತು ನಮ್ಮ ಸಹೋದರರಿಬ್ಬರು ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದೇವೆ ಹೊರತು, ರಾಜ್ಯಘಟಕದಲ್ಲಿ ಕೆಲಸ ಮಾಡಿಲ್ಲ. ಅಂತಹ ಅವಕಾಶ ಇದೀಗ ಕೆ.ಎಸ್.ದಿವಾಕರ್ ಅವರಿಗೆ ದಕ್ಕಿದೆ. ಮುಂದೊಂದು ದಿನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸಿಎಂ ಆದರೆ, ಆಗ ಕೆ.ಎಸ್.ದಿವಾಕರ್ ಸಚಿವರಾದರೂ ಅಚ್ಚರಿಪಡುವಂತಿಲ್ಲ. ಹಾಗಾಗಿ ಪಕ್ಷಕ್ಕೆ ದುಡಿದರೆ ಇಂದಲ್ಲ ನಾಳೆ ಫಲ ಸಿಗಲಿದೆ ಎಂದು ತಿಳಿಸಿದರು.
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ.ಎಸ್.ದಿವಾಕರ್ ಸಿಗುವ ನಿರೀಕ್ಷೆಯಲ್ಲಿದ್ದು ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮುನ್ಸೂಚನೆ ನೀಡಿದ್ದರು. ಇದರಿಂದ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟುವುದನ್ನು ಅರಿತ ಜನಾರ್ಧನರೆಡ್ಡಿ, ದಿವಾಕರ್ ಅವರೊಂದಿಗೆ ಮಾತುಕತೆ ನಡೆಸಿ, ಮನವೊಲಿಸಿ, ಪಕ್ಷದಲ್ಲೇ ಮುಂದುವರೆಸುವಲ್ಲಿ ಯಶಸ್ವಿಯಾಗಿದ್ದಾರೆ.