ಜಿಲ್ಲೆ

ಜಿಲ್ಲಾದ್ಯಂತ ಸಂಭ್ರಮದ ಕ್ರಿಸಮಸ್

ಎಸ್.ಎರ್ರಿಸ್ವಾಮಿ

ಬಳ್ಳಾರಿ : ನಗರ ಹಾಗೂ ಜಿಲ್ಲಾದ್ಯಂತ ಸುತ್ತಮುತ್ತ ಬುಧವಾರ ಶ್ರದ್ಧಾ ಭಕ್ತಿಯಿಂದ ಕ್ರಿಸ್‌ಮಸ್ ಆಚರಿಸಲಾಯಿತು. ಇಲ್ಲಿನ ವಿವಿಧ ಚರ್ಚ್‌ಗಳಲ್ಲಿ ಧರ್ಮಗುರುಗಳು ಬೋಧನೆ ಮಾಡಿದರು. ಕ್ರಿಸ್‌ಮಸ್ ಅಂಗವಾಗಿ ಕ್ರೈಸ್ತ ಸಮುದಾಯದ ಸದಸ್ಯರ ಮನೆಗಳಲ್ಲಿ ಸಂಭ್ರಮ ಮನೆ ಮಾಡಿತು. ಯೇಸುವನ್ನು ಕೊಂಡಾಡುವ ದೇವಸ್ತುತಿ ಗೀತೆಗಳನ್ನು ಹಾಡಿ ಭಕ್ತಿ ಮೆರೆದರು. ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಂತಸ ಹಂಚಿಕೊಂಡರು.

ಇಲ್ಲಿನ ದೇವಿನಗರದ ಆರೋಗ್ಯ ಮಾತೆ ಆವರಣದಲ್ಲಿ ನೆರೆದಿದ್ದವರಿಗೆ ಶುಭಾಶಯ ಕೋರಿದರು. ಎಲ್ಲರಿಗೂ ಎಲ್ಲರಿಗೂ ಕೇಕ್ ವಿತರಿಸಲಾಯಿತು. ಹೊಸ ಬಟ್ಟೆ ಧರಿಸಿ ಕಂಗೊಳಿಸುತ್ತಿದ್ದ ಚಿಣ್ಣರು, ಗಮನ ಸೆಳೆದರು. ಸಾಂತಾಕ್ಲಾಸ್ ವೇಷಧಾರಿಗಳು ಉಡುಗೊರೆ ಮತ್ತು ಚಾಕಲೇಟ್ ವಿತರಿಸಿದರು. ಚರ್ಚ್ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಗೋದಲಿ ಕಣ್ತುಂಬಿಕೊಂಡ ಜನರು, ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿಯಿಂದಲೇ ಕ್ರೈಸ್ತರ ಮನೆಗಳಲ್ಲಿ ಮತ್ತು ಚರ್ಚ್ ಗಳಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ರಾತ್ರಿ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆ, ಬಲಿಪೂಜೆ, ದೇವಸ್ತುತಿ ಗಾಯನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಚರ್ಚ್‌ಗಳನ್ನು ವಿಶೇಷವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ರೋಸ್ಟ್ ಕುಕ್ಕೀಸ್, ಚಕ್ಕುಲಿ, ಬೂಂದಿ, ಕರ್ಚಿಕಾಯಿ ಮುಂತಾದ ಸಿಹಿ ಪದಾರ್ಥಗಳ ತಯಾರಿಕೆಯಲ್ಲಿ ಮಹಿಳೆಯರು ತಯಾರಿಸಿದ್ದರು. ತಿಂಡಿಗಳನ್ನು ಅಕ್ಕಪಕ್ಕದ ಮನೆಯವರಿಗೆ ನೀಡಿ ಸಂಭ್ರಮಿಸಿದರು. ಹಬ್ಬದ ದಿನ ಮಾಂಸದೂಟ ಚಿಕನ್, ಮಟನ್ ಬಿರಿಯಾನಿ, ಕಬಾಬ್ ಆಹಾರವನ್ನು ಸೇವಿಸಿದರು.

===