ಬಳ್ಳಾರಿ : ಇಲ್ಲಿನ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾ ಕಲಾವಿದರ ಸಂಘದಿಂದ ಜ.4 ಮತ್ತು 5 ರಂದು ಜಿಲ್ಲಾ ಕಲಾ ವೈಭವ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಹೇಳಿದರು.
ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಗರದ ರಾಘವ ಕಲಾಮಂದಿರದಿಂದ ದೊಡ್ಡನಗೌಡ ರಂಗಮಂದಿರವರೆಗೆ ವಿವಿಧ ಕಲಾ ತಂಡಗಳ ವಸಂತ ವೈಭವದ ಮೆರವಣಿಗೆಯನ್ನು ಪ್ರಥಮ ದರ್ಜೆ ಗುತ್ತಿಗೆದಾರ ಮಸೀದಿಪುರ ಸಿದ್ಧರಾಮನಗೌಡ ಉದ್ಘಾಟಿಸಲಿದ್ದಾರೆ. ಆ ದಿನದಂದೆ ಜರುಗುವ ವೇದಿಕೆ ಕಾರ್ಯಕ್ರಮವನ್ನು ಎಮ್ಮಿಗನೂರು ಹಂಪಿ ಸಾವಿರ ದೇವರಮಠದ ಶ್ರೀ ವಾಮದೇವ ಶಿವಾಚಾರ್ಯ ಮಹಾಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಸಂಸದ ಈ.ತುಕಾರಾಮ್ ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನಿಸಲಾಗುವುದು. ವಸಂತ ವೈಭವದ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ ಎಂದು ವಿವರಿಸಿದರು.
ಜ.5 ರಂದು ಕವಿ, ಕಾವ್ಯ, ಕುಂಚ ಹಾಗೂ ಗಾಯನ ಕಾರ್ಯಕ್ರಮಗಳು ಜರುಗುವುದು. ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ವೈ.ಸತೀಶ್ ಚಾಲನೆ ನೀಡಲಿದ್ದಾರೆ. ಜಿಲ್ಲೆಯ ವಿವಿಧ ಕೇತ್ರದ ಕಲಾ ಸಾಧಕರಿಗೆ ಸನ್ಮಾನಿಸಲಾಗುವುದು. ಬಾಳಿದ ಹೂ ಮತ್ತು ರಕ್ತರಾತ್ರಿ ಎಂಬ ಪೌರಾಣಿಕ ನಾಟಕ ಪ್ರದರ್ಶನ ಜರುಗಲಿದ್ದು ಕಾರ್ಯಕ್ರಮ ಯಶ್ವಸಿಗೊಳಿಸಿಬೇಕು ಎಂದು ಕರೆ ನೀಡಿದರು. ಉಪಾಧ್ಯಕ್ಷೆ ಆದೋನಿ ವೀಣಾ ಕಾರ್ಯದರ್ಶಿ ಎಚ್.ತಿಪ್ಪೇಸ್ವಾಮಿ ಖಜಾಂಚಿ ರಮಣಪ್ಪ ಭಜಂತ್ರಿ, ಜಂಟಿ ಕಾರ್ಯದರ್ಶಿಗಳಾದ ಸುಬ್ಬಣ್ಣ ,ವೀರೇಶ ದಳಾವಾಯಿ , ಕಾರ್ಯಕಾರಿ ಸಮಿತಿ ಸದಸ್ಯರಾದ ವಿನೋದ, ಮಂಜುನಾಥ ಗೋವಿಂದ ವಾಡ, ನಾಗನ ಗೌಡ, ಜಯಣ್ಣ ಇದ್ದರು.