ಬಳ್ಳಾರಿ : ವರ್ಷದಿಂದ ವರ್ಷಕ್ಕೆ ಶೈಕ್ಷಣಿಕ ಮಟ್ಟದಲ್ಲಿ ಪ್ರಗತಿ ಸಾಧಿಸಬೇಕಿದ್ದ ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಕಳೆದ ಕೆಲ ವರ್ಷದ ಹಿಂದ ವಿವಿಧ ವಿವಾದಗಳಲ್ಲಿ ಸಿಲುಕಿ ಹೆಸರಾಗಿದೆ.
ವಿವಿಯಲ್ಲಿ ಕಳೆದ ವರ್ಷ ಕಾಯಂ ಕುಲಪತಿ ನೇಮಕಗೊಳಿಸುವ ಮುನ್ನ ಹಲವರನ್ನು ಪ್ರಭಾರಿ ಕುಲಪತಿಯಾಗಿ ನೇಮಿಸಿ ಶೈಕ್ಷಣಿಕ ಹಾಗೂ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಅಲ್ಲದೆ, ಕೆಲ ಪ್ರಭಾರಿ ಕುಲಪತಿಗಳು ಭ್ರಷ್ಟಚಾರ ಆರೋಪ ಹೊತ್ತು ಹುದ್ದೆ ತ್ಯಜಿಸಿದರು. ನಕಲಿ ಜಾತಿ ಪ್ರಮಾಣ ಪತ್ರ ಒದಗಿಸಿ ಕಾಯಂ ಕುಲಪತಿಯಾಗಿ ನೇಮಕಗೊಂಡಿದ್ದಾರೆ ಎಂಬುದಾಗಿ ಆರೋಪಿಸಿ ನ್ಯಾಯಾಲಯ ಮೊರೆ ಹೋದ ಪರಿಣಾಮ ಅವರ ಕುಲಪತಿ ಹುದ್ದೆಯನ್ನು ಹೈಕೋರ್ಟ್ ರದ್ದುಗೊಳಿಸಿತು. ಅಲ್ಲದೆ, ವಿವಿಯ ಆವರಣದಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ವಸತಿ ನಿಲಯಗಳಲ್ಲಿ ಹಣ ದೋಚಲು ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಕಟ್ಟಡ ಉದ್ಘಾಟಿಸಿದಲ್ಲದೆ ಹಾಗೂ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಸಿಂಡಿಕೇಟ್ ಸದಸ್ಯರೊಬ್ಬರು ಕುಲಪತಿ ವಿರುದ್ಧ ಆರೋಪಿಸಿದ್ದರು. 135 ಹೊರ ಗುತ್ತಿಗೆದಾರರ ನೌಕರರ ವೇತನ-ಭವಿಷ್ಯ ನಿಧಿಯಲ್ಲಿ ಹಗರಣ, ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಗೊಂದಲ, ಶುಲ್ಕ ಹೆಚ್ಚಳ, ಇತ್ತೀಚೆಗೆ ನಡೆದ ಸಿಂಡಿಕೇಟ್ ಸದಸ್ಯತ್ವ ನೇಮಕದಲ್ಲಿ ಸ್ಥಳಿಯರಿಗೆ ಮಾನ್ಯತೆ ನೀಡದೆ ಬೇರೆ ಜಿಲ್ಲೆಯವರಿಗೆ ಮನ್ನಣೆ ವಿವಾದಗಳು ಸೇರಿದಂತೆ ಸದ್ಯ ಹೊಸ ವಿವಾದವೊಂದು ವಿವಿಗೆ ಹಂಟಿಕೊಂಡಿದೆ.
ಏನಿದು ಹೊಸ ವಿವಾದ : ವಿವಿಯ ಕೆಲ ಬೋಧಕ ಮತ್ತು ಭೋದಕೇತರ ಹಾಗೂ ಹೊರಗುತ್ತಿಗೆ ಸಿಬ್ಬಂದಿ ಮೀಟರ್ ಬಡ್ಡಿ ದಂಧೆ ನಡೆಸುತ್ತಾರೆ ಎಂಬ ಹೊಸ ವಿವಾದವೊಂದು ಬೆಳಕಿಗೆ ಬಂದಿದೆ. ವಿವಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದ ಗ್ರಂಥಾಲಯದ ಅಟೆಂಡರ್ ಬಾಲಚಂದ್ರ ಎಂಬುವವರು ವಿವಿಯ ಸಹಾಯ ಪ್ರಾಧ್ಯಾಪಕರೊಬ್ಬರ ಬಳಿ ಮೂರು ವರ್ಷದ ಹಿಂದೆ ಒಂದು ಲಕ್ಷ ರೂ. ಸಾಲ ಪಡೆದಿದ್ದರು. ಬಡ್ಡಿ ಸೇರಿ ಅದು ಮೂರು ಲಕ್ಷ ರೂ. ಆಗಿತ್ತು. ತನ್ನ ಅಪ್ತ ಸಂಬಂಧಿಕ ಬಳಿ ಚೀಟಿ ಹಣ ಹಾಕಿಸಿದ್ದ ಪ್ರಾಧ್ಯಾಪಕ ಚೀಟಿ ಹಣವನ್ನು ವಸೂಲಿ ಮಾಡಿ, ಸಾಲದ ಹಣವನ್ನೂ ತೀರಿಸುವಂತೆ ಕಿರುಕುಳ ನೀಡಿದ್ದರಿಂದ ಮನನೊಂದು ಡೆತ್‌ನೋಟ್ ಬರೆದಿಟ್ಟು ಕಲಬುರಗಿ ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಪತ್ನಿ ಪ್ರಾಧ್ಯಾಪಕ ಹಾಗೂ ಸಂಬಂಧಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ ವಿಶೇಷ ಎಂದರೆ ಡೆತ್‌ನೋಟ್‌ನಲ್ಲಿ ಪ್ರಾಧ್ಯಾಪಕನ ಹೆಸರು ಹಾಗೂ ವಿವಿಯಲ್ಲಿ ಹಲವು ವರ್ಷಗಳಿಂದ ಮೀಟರ್ ಬಡ್ಡಿ ವ್ಯವಹಾರ ನಡೆಯುತ್ತಿದೆ ಎನ್ನುವ ಸಂಗತಿ ಕೂಡ ತೆರೆದುಕೊಂಡಿದೆ. ಅಲ್ಲದೆ, ಸಾವಿಗೆ ಕಾರಣರಾದ ಇಬ್ಬರು ಸೇರಿ ವಿವಿಯ ಎಲ್ಲ ವಿಭಾಗದಲ್ಲಿ ಸೇರಿ ಮೂವತ್ತಕ್ಕೂ ಅಧಿಕ ಬೋಧಕ ಹಾಗೂ ಸಿಬ್ಬಂದಿ ಮೀಟರ್ ಬಡ್ಡಿ ದಂಧೆಯಲ್ಲಿ ತೊಡಗಿದ್ದಾರೆ ಎನ್ನುವುದು ಬಯಲಾಗಿದೆ. ಕಳೆದ ಕೆಲ ವರ್ಷಗಳಿಂದ ಒಳಗೊಳಗೆ ನಡೆಯುತ್ತಿದ್ದ ಮೀಟರ್ ಬಡ್ಡಿ ವ್ಯವಹಾರ ಸಿಬ್ಬಂದಿಯೊಬ್ಬರ ಸಾವಿನ ಬಳಿಕ ಹೊರಬಿದ್ದು ವಿವಿಗೆ ತಲ್ಲಣಗೊಳಿಸಿದೆ. ಮೀಟರ್ ದಂಧೆಯ ಬಗ್ಗೆ ವಿವಿಯ ಪ್ರಮುಖ ಅಧಿಕಾರಿಗಳು ಗಮನಕ್ಕೆ ಇದ್ದರೂ ಯಾವುದೇ ಕ್ರಮವಹಿಸದೆ ಅಂತರಿಕವಾಗಿ ಬೆಂಬಲ ನೀಡಿದ್ದಾರೆ ಇದನ್ನು ತಳಮಟ್ಟದಲ್ಲಿಯೇ ಮಟ್ಟ ಹಾಕಿದ್ದರೆ ಸಿಬ್ಬಂದಿ ಸಾವು ಆಗುತ್ತಿರಿಲಿಲ್ಲ ಎಂಬುದಾಗಿ ವಿವಿಯ ಅಪ್ತ ಮೂಲಗಳು ತಿಳಿಸಿದವು. ಸದ್ಯ ಪ್ರಕರಣ ದಾಖಲಾಗಿರುವುದರಿಂದ ವಿವಿಯ ಪ್ರಾಧ್ಯಾಪಕರನ್ನು ವಿಚಾರಿಸಲು ಹಾಗೂ ಮೀಟರ್ ಬಡ್ಡಿ ದಂಧೆ ಬಗ್ಗೆ ತನಿಖೆ ನಡೆಸಲು ಜ.15 ರಂದು ಕಲಬುರಗಿ ಪೊಲೀಸ್ ತಂಡ ವಿವಿಗೆ ತನಿಖೆ ಕೈಗೊಳ್ಳಲಿದೆೆ. ಶಿಕ್ಷಣ ಕೇಂದ್ರದಲ್ಲಿ ಶಿಕ್ಷಣಕ್ಕೆ ಮಾತ್ರ ಅದ್ಯತೆ ನೀಡಬೇಕು ವಿನಾಃ ಇಂತಹ ಬಡ್ಡಿ ವ್ಯವಹಾರಗಳನ್ನು ಮಟ್ಟಹಾಕಬೇಕು ಎಂಬುದು ಅಭಿಪ್ರಾಯವಾಗಿದೆ.
ಕೋಟ್.... ವಿವಿಯಲ್ಲಿ ಮೀಟರ್ ಬಡ್ಡಿ ದಂಧೆ ನಡೆಯುವುದು ನೂರಕ್ಕೆ ನೂರು ಸತ್ಯ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಜರುಗಿಸಿಬೇಕು. ಸಂಬಂಧಪಟ್ಟ ಪ್ರಾಧ್ಯಾಪಕರನ್ನು ಹುದ್ದೆಯಿಂದ ಅಮಾನತುಗೊಳಿಸಬೇಕು.
- ಮರ್ಚೆಡ್ ಮಲ್ಲಿಕಾರ್ಜುನಗೌಡ, ಮಾಜಿ ಸದಸ್ಯ, ವಿವಿ ಸಿಂಡಿಕೇಟ್, ಬಳ್ಳಾರಿ.