ಬಳ್ಳಾರಿ : ಕಳೆದ ಮೂರು ವರ್ಷಗಳಲ್ಲಿ ಅವಳಿ ಜಿಲ್ಲೆಯ ಎ ಹಾಗೂ ಬಿ ಶ್ರೇಣಿ ದೇವಸ್ಥಾನಗಳಲ್ಲಿ ವಾರ್ಷಿಕ ಅದಾಯದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳಿಸಿ, ಕೆಲ ದೇವಸ್ಥಾನದ ಠೇವಣಿಯಲ್ಲಿ ಹಣ ಉಳಿಸಲಾಗಿದೆ.
ಅವಳಿ ಜಿಲ್ಲೆಯ ಎ ಹಾಗೂ ಬಿ ಶ್ರೇಣಿ ದೇವಸ್ಥಾನಗಳಾದ ನಗರದ ಕನಕ ದುರ್ಗಮ್ಮ ದೇವಿ 10.20 ಕೋಟಿ ರೂ. , ತಾಲೂಕಿನ ಎತ್ತಿನಬೂದಿಹಾಳ್ ಗ್ರಾಮದ ಕಟ್ಟೆಬಸವೇಶ್ವರ 1.18 ಕೋಟಿ ರೂ. , ಕುರುಗೋಡಿನ ದೊಡ್ಡಬಸವೇಶ್ವರ ಸ್ವಾಮಿ 2.42 ಕೋಟಿ ರೂ., ಸಿರಗುಪ್ಪ ತಾಲೂಕಿನ ಬಲಕುಂದಿ ಗ್ರಾಮದ ಬನ್ನಿ ಮಹಾಂಕಾಳಮ್ಮ 1.18 ಕೋಟಿ ರೂ., ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ 4.35 ಕೋಟಿ ರೂ., ಹೂವಿನಹಡಗಲಿಯ ಮೈಲಾರ ಲಿಂಗೇಶ್ವರ ಸ್ವಾಮಿ 12.89 ಕೋಟಿ ರೂ., ಹರಪನಹಳ್ಳಿಯ ಉಚ್ಚಂಗಿದುರ್ಗದ ಉತ್ಸಾವಾಂಬದೇವಿ 3.73, ಬುಕ್ಕಸಾಗರದ ಏಳುಹೆಡೆ ನಾಗಪ್ಪ 1.28 ಕೋಟಿ ರೂ., ಕೋಟೆಮಲ್ಲೇಶ್ವರ ಸ್ವಾಮಿ 93.55 ಲಕ್ಷ ರೂ., ಕುಮಾರ ಸ್ವಾಮಿ 66.79 ಲಕ್ಷ ರೂ., ದರೂರು ಗ್ರಾಮದ ವೀರಭದ್ರಶ್ವರ ಸ್ವಾಮಿ 28.20 ಲಕ್ಷ ರೂ., ವರವಿನ ಮಲ್ಲೇಶ್ವರ 37.72 ಲಕ್ಷ ರೂ. ಸೇರಿ ಮೂರು ವರ್ಷದಲ್ಲಿ ಒಟ್ಟಾರೆ 47.64 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳಿಸಲಾಗಿದೆ. ಒಟ್ಟಾರೆ ಈ ಎಲ್ಲ ದೇವಸ್ಥಾನಗಳಿಂದ ಮೂರು ವರ್ಷದಲ್ಲಿ 53.15 ಕೋಟಿ ರೂ. ಅದಾಯ ಬಂದಿದೆ. ಅಲ್ಲದೆ, ಅಖಂಡ ಜಿಲ್ಲೆಯ ಹಂಪಿಯ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ ಪ್ರಸ್ತುತ ಠೇವಣಿಯಲ್ಲಿ 20.64 ಕೋಟಿ ರೂ. ಅತ್ಯಧಿಕ ಹಣ ಉಳಿದಿದೆ.
ಏನೆಲ್ಲ ಅಭಿವೃದ್ಧಿ : ಜಿಲ್ಲೆಯ ಎ ಹಾಗೂ ಬಿ ಶ್ರೇಣಿ ದೇವಸ್ಥಾನಗಳಲ್ಲಿ ವಾರ್ಷಿಕ ಅದಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯೂ ಕೂಡ ಹೆಚ್ಚುತ್ತಿದೆ. ಆದ್ದರಿಂದ, ಮೂಲ ಸೌಕರ್ಯಗಳಾದ ಶೌಚಾಲಯ, ಕೊಠಡಿ, ಕುಡಿವ ನೀರಿನ ವ್ಯವಸ್ಥೆ , ಬೀದಿ ದೀಪಗಳು, ಆವರಣಕ್ಕೆ ಪಾಲಿಶ್ ಬಂಡೆಗಳು, ಸರತಿ ಸಾಲಿನಲ್ಲಿ ತೆರಳಲು ವಿಶೇಷ ದ್ವಾರ ಸೌಲಭ್ಯ, ಹಬ್ಬದ ದಿನ, ಅಮಾವಾಸ್ಯೆ ಹಾಗೂ ಹುಣ್ಣಿಮೆ ಮತ್ತು ವಿಶೇಷ ದಿನಗಳಲ್ಲಿ ಭಕ್ತರಿಗೆ ಪ್ರಸಾದ, ಪೂಜೆ ಆಲಂಕಾರ, ಜಾತ್ರೆ ಹಾಗೂ ಕುಂಭೋತ್ಸವ ದಿನದಂದು ಭಜನೆ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಅನುದಾನ ಬಳಸಿಕೊಳ್ಳಲಾಗುತ್ತಿದೆ. ಬಳ್ಳಾರಿ ಹಾಗೂ ವಿಜಯನಗರ ಸೇರಿ ಎ, ಬಿ ಹಾಗೂ ಸಿ ಶ್ರೇಣಿಯ ಒಟ್ಟು 689 ದೇವಸ್ಥಾನಗಳಿವೆ. ಇದರಲ್ಲಿ ಸಿ ಗ್ರೇಡ್ ದೇವಸ್ಥಾನಗಳು ಅಧಿಕವಿದ್ದು ಹೆಚ್ಚಿನ ದೇವಸ್ಥಾನಗಳು ಸಿರಗುಪ್ಪ ತಾಲೂಕಿನಲ್ಲಿವೆ.
ಬಹುತೇಕ ನೋಂದಣಿ : ಕಳೆದ ಹಲವು ವರ್ಷಗಳ ಹಿಂದೆ ದೇವಸ್ಥಾನಕ್ಕೆ ಪೂರ್ವಿಕರು ದಾನವಾಗಿ ನೀಡಿದ್ದ ಸ್ಥಳ ಹಾಗೂ ಭೂಮಿಯನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿಗಳ ಇಲಾಖೆಯೂ ದೇವಸ್ಥಾನದ ಹೆಸರಿನಲ್ಲಿ ನೋಂದಣಿಸಲಾಗಿದೆ. ಕೆಲ ವರ್ಷಗಳ ಹಿಂದೆ ದೇವಸ್ಥಾನದ ಆರ್ಚಕರ ಹೆಸರಿನಲ್ಲಿ ನೋಂದಣಿಸಲಾಗುತ್ತಿತ್ತು. ಆದರೆ, ಅರ್ಚಕರು ಮರಣದ ನಂತರ ಕುಟುಂಬದಲ್ಲಿ ಯಾರಿಗೆ ಆ ಸ್ಥಾನ ವಹಿಸಬೇಕು ಎಂಬ ಕಲಹ ಉಂಟಾಗಿದ್ದರಿಂದ ಸದ್ಯ ದೇವಸ್ಥಾನ ಹೆಸರಿನ ಟ್ರಸ್ಟ್‌ನಲ್ಲಿ ನೋಂದಣಿಸಲಾಗಿದೆ. ಅವಳಿ ಜಿಲ್ಲೆಯ ಕೆಲ ದೇವಸ್ಥಾನಗಳು ನೋಂದಣಿ ಉಳಿದಿದ್ದು ಕೆಲ ದಾಖಲೆ ಪತ್ರಗಳ ಕೊರತೆಯಿಂದ ಕೆಲ ನೋಂದಣಿಯಾಗದೆ ಉಳಿದಿವೆ ಎಂದು ಇಲಾಖೆಯ ಅಧಿಕಾರಿ ತಿಳಿಸಿದರು.
ಕೋಟ್... ಅವಳಿ ಜಿಲ್ಲೆಯ ದೇವಸ್ಥಾನಗಳಲ್ಲಿ ವಾರ್ಷಿಕ ಅದಾಯದಿಂದ ದೇವಸ್ಥಾನದ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ವರ್ಷ ಇಂತಿಷ್ಟು ಕಾಮಗಾರಿ ಪೂರ್ಣಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ.
- ಎ. ಸವಿತಾ, ಎಸಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿಗಳ ಇಲಾಖೆ. ಅಖಂಡ ಜಿಲ್ಲೆ.