ಜಿಲ್ಲೆ

ಅಭಿವೃದ್ಧಿಯೇ ಮೊದಲ ಆದ್ಯತೆ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ನಗರದ ಜನರ ಋಣ ನನ್ನ ಮೇಲಿದೆ. ಅವರ ಏಳಿಗೆ ಹಾಗೂ ಅಭಿವೃದ್ಧಿಯೇ ಮೊದಲ ಅದ್ಯತೆ ಎಂದು ಶಾಸಕ ನಾರಾ ಭರತರೆಡ್ಡಿ ಹೇಳಿದರು.

ಇಲ್ಲಿನ ಹನುಮಾನ್ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಒಂದು ಕುಟುಂಬ ಇದ್ದಂತೆ. ಪಕ್ಷಕ್ಕೆ ಸೇರ್ಪಡೆಯಾದ ಕಾರ್ಯಕರ್ತರಿಗೆ ಅರ್ಹ ಹುದ್ದೆ ನೀಡುವುದು ನಮ್ಮ ಜವಾಬ್ದಾರಿ. ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವ ವೈರಿಯಾಗಲಿ ಪಕ್ಷಕ್ಕೆ ಸ್ವಾಗತಿಸುವುದು ಕರ್ತವ್ಯವಾಗಿದೆ ಎಂದರು.

ಪಕ್ಷದ ಭರವಸೆಯಂತೆ ನಗರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. 1200 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಕುಡಿವ ನೀರಿನ ಕಾಮಗಾರಿ ಆರಂಭವಾಗಿದೆ. ಪ್ರಾಥಮಿಕ ಹಂತದಲ್ಲಿ 260 ಕೋಟಿ ರೂ.ಗಳ ಟೆಂಡರ್ ಆಗಿದ್ದು, ಸರ್ವೆ ಕಾರ್ಯ, ಪೈಪಲೈನ್ - ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಪ್ರಾಯೋಗಿಕವಾಗಿ ಆರಂಭವಾಗಿದೆ. ರಸ್ತೆ ಹಾಗೂ ವೃತ್ತಗಳ ಅಭಿವೃದ್ಧಿ, ನಗರ ಸುಂದರೀಕರಣ, ಮಂದಿರ-ಮಸೀದಿ-ದರ್ಗಾ-ಚರ್ಚ್‌ಗಳ ಅಭಿವೃದ್ಧಿಗೂ ಅನುದಾನ ನೀಡಿರುವೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಸಲಾಂ ಬಳ್ಳಾರಿ ಅಭಿಯಾನದ ಭಾಗವಾಗಿ ವಾರ್ಡಿನಾದ್ಯಂತ ಸಂಚರಿಸಿ, ಜನರಿಂದ ಅಹವಾಲು ಸ್ವೀಕರಿಸಿದರು. ಬಳಿಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಅವರು ನೂತನವಾಗಿ ಸೇರ್ಪಡೆಯಾದ ಕಾರ್ಯಕರ್ತರನ್ನು ಪಕ್ಷಕ್ಕೆ ಸ್ವಾಗತಿಸಿದರು.