ಜಿಲ್ಲೆ

ನೋಂದಣಿ ಆರಂಭಿಸಲು ಆಗ್ರಹ

ಬಳ್ಳಾರಿ ; ಬೆಂಬಲ ಬೆಲೆಯಡಿ ಹಿಂಗಾರು ಜೋಳ ಖರೀದಿ ನೋಂದಣಿ ಆರಂಭಿಸಲು ಆಗ್ರಹಿಸಿ ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಕನ್ನಡ ನಾಡು ರೈತ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಯಿತು.

ಕನ್ನಡನಾಡು ರೈತ ಸಂಘದ ರಾಜಾಧ್ಯಕ್ಷ ಈಶ್ವರಪ್ಪ ಮಾತನಾಡಿ, ಹಿಂಗಾರು ಜೋಳ ಕಟಾವು ಮಾಡಿ 4 ತಿಂಗಳು ಕಳೆದಿವೆ. ಆದರೆ ಸರ್ಕಾರವು ರಜೆಯ ಸಂದರ್ಭದಲ್ಲಿ (ಅಂಬೇಡ್ಕರ್ ಜಯಂತಿಯಂದು) ರೈತರಿಗೆ ಯಾವುದೇ ರೀತಿಯ ಮಾಹಿತಿ ನೀಡದೆ, 382 ರೈತರಿಂದ ಮಾತ್ರ ಜೋಳ ಕೊಂಡುಕೊಳ್ಳುವುದರ ಬಗ್ಗೆ ಅನುಮತಿ ನೀಡಿದೆ. ಇತರೆ ರೈತರ ಜೋಳವನ್ನು ತಿರಸ್ಕೃತ ಮಾಡಿದೆ ಎಂದು ತಿಳಿಸಿದರು.

ಏ.15 ರಂದು ಎಪಿಎಂಸಿ ಯಾರ್ಡ್ ಆವರಣದಲ್ಲಿ ಪ್ರತಿಭಟನೆ ಮಾಡಿದಾಗ, ಎಡಿಸಿ ಪ್ರತಿಭಟನಾ ಸ್ಥಳಕ್ಕೆ ಭೇಟಿ, ರೈತರಿಗೆ ಅನುಕೂಲ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ.ಕೇಂದ್ರ ಸರ್ಕಾರವು ಹೊರಡಿಸಿರುವ ಜೋಳದ ಬೆಂಬಲ ಬೆಲೆಯ ಕಾನೂನು ವ್ಯವಸ್ಥೆ ತಿರಸ್ಕರಿಸಿ, ಅಕ್ರಮ ಎಸಗಿರುವ ಕಾರ್ಯ ನಿರ್ವಾಹಣಾಧಿಕಾರಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು. ಹೊಸದಾಗಿ ನೋಂದಣಿ ಮಾಡಿಕೊಂಡು ರೈತರಿಗೆ ಸೂಕ್ತವಾದ ನ್ಯಾಯವನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

---