ಜಿಲ್ಲೆ

ಹಿಂಗಾರು ಜೋಳ ಖರೀದಿಗೆ ಒತ್ತಾಯ

ಎಸ್.ಎರ್ರಿಸ್ವಾಮಿ

ಬಳ್ಳಾರಿ; ಬೆಂಬಲ ಬೆಲೆಯಡಿ ಹಿಂಗಾರು ಜೋಳ ಖರೀದಿ ಆರಂಭಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಮಂಗಳವಾರ ಪ್ರತಿಭಟಿಸಿದರು

ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡಿ, ತಾಲೂಕಿನ ರೈತರು ಸಾಕಷ್ಟು ಪ್ರಮಾಣದಲ್ಲಿ ಜೋಳ ಬೆಳೆದಿದ್ದಾರೆ. ಈ ಬೆಳೆಯ ಮುಂಗಾರು ಮತ್ತು ಹಿಂಗಾರಿನ ಖರೀದಿ ಪ್ರಕ್ರಿಯೆಯು ಸರಿಯಾದ ಸಮಯಕ್ಕೆ ನಡೆಯದಿರುವುದು ರೈತರಲ್ಲಿ ಆತಂಕವನ್ನು ಸೃಷ್ಟಿ ಮಾಡುತ್ತಿದೆ ಎಂದು ತಿಳಿಸಿದರು.

ಇದುವರೆಗೂ ಖರೀದಿ ಪ್ರಕ್ರಿಯೆಯಲ್ಲಿ ನೊಂದಣಿ ಸಮಸ್ಯೆ, ಗಾಡಿ ಜಿಪಿಎಸ್, ಲಾಗಿನ್ ಸಮಸ್ಯೆ, ಸರ್ವರ್ ಸಮಸ್ಯೆ ಸೇರಿ ಹಲವು ಲೋಪಗಳ ಕಾರಣದಿಂದ ಈ ಜೋಳ ಖರೀದಿ ಪ್ರಕ್ರಿಯೆಯು ವಿಳಂಬವಾಗುತ್ತಿದೆ. ಇದು ರೈತರನ್ನು ಬಾಧಿಸುತ್ತಿದೆ. ಇದಕ್ಕೆ ಯಾರು ಕಾರಣ? ಎಲ್ಲಿಂದ ಈ ಸಮಸ್ಯೆ ಉದ್ಭವವಾಗುತ್ತಿದೆ ಎಂದು ಪ್ರಶ್ನೆ ಹುಟ್ಟುತ್ತಿದೆ. ಸರ್ಕಾರ ಮತ್ತು ಅಧಿಕಾರಿಗಳು ಕೂಡಲೇ ಈ ಸಮಸ್ಯೆ ಬಗ್ಗೆ ನಿಗಾವಹಿಸಿ ಜೋಳ ಖರೀದಿ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಲು ಆದೇಶಿಸಬೇಕು ಎಂದು ಆಗ್ರಹಿಸಿದರು.

ಎಐಕೆಕೆಕೆಎಂಎಸ್ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡಿ, ಹಿಂಗಾರು ಜೋಳದ ಖರೀದಿಯೂ ಸಹ ಇದುವರೆಗೂ ಪ್ರಾರಂಭವಾಗದಿರುವುದು ಸಮಸ್ಯೆಯನ್ನು ಉಂಟುಮಾಡುತ್ತಿದೆ. ಇತ್ತೀಚೆಗೆ ಕೆಲವು ದಿನಗಳಿಂದ ಮಳೆ ಬರುವ ವಾತಾವರಣ ನಿರ್ಮಾಣವಾಗುತ್ತಿದ್ದು, ರೈತರು 6 ತಿಂಗಳು ಕಷ್ಟಪಟ್ಟು ಬೆಳೆದ ಬೆಳೆಯ ರಕ್ಷಣೆಗೆ ಪರದಾಡುವಂತಾಗಿದೆ ಎಂದು ತಿಳಿಸಿದರು.

---