ಜಿಲ್ಲೆ

ವೈಜ್ಞಾನಿಕ ವೇತನ ಜಾರಿಗೆ ಆಗ್ರಹ

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ಬೆಲೆ ಏರಿಕೆಗೆ ಅನುಗುಣವಾಗಿ ವೈಜ್ಞಾನಿಕ ಕನಿಷ್ಠ ವೇತನ ನಿಗದಿಗೆ ಆಗ್ರಹಿಸಿ, ಇಲ್ಲಿನ ಕಾರ್ಮಿಕ ಇಲಾಖೆ ಮುಂಭಾಗದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ವತಿಯಿಂದ ‘ ಕಾರ್ಮಿಕ ಇಲಾಖೆ ಜಿಲ್ಲಾ ಕಚೇರಿ ಚಲೋ ’ ಹಮ್ಮಿಕೊಂಡು ಸೋಮವಾರ ಪ್ರತಿಭಟಿಸಿ ಮನವಿ ಸಲ್ಲಿಸಿತು.

ಸೇವಾ ಹಿರಿತನದ ಮೇಲೆ ವೇತನ ಜಾರಿ, ಪಿಂಚಣಿ ಸೌಲಭ್ಯ, ವೇತನ ಹೆಚ್ಚಳಕ್ಕಾಗಿ ಆಗ್ರಹ ಸೇರಿದಂತೆ ಶಿಕ್ಷಣ ವೆಚ್ಚ, ವೈದ್ಯಕೀಯ ಅಗತ್ಯ, ಹಬ್ಬಗಳು, ಆಚರಣೆಗಳ ಒಳಗೊಂಡು ಕನಿಷ್ಠ ಮನರಂಜನೆ ಮತ್ತು ವೃದ್ಯಾಪ್ಯ, ಮದುವೆ ಇತ್ಯಾದಿಗಳಿಗೆ ಕೂಡಿಡುವುದಕ್ಕೆ ಕನಿಷ್ಠ ವೇತನದಲ್ಲಿ ಶೇ. 25ರಷ್ಟು ಪ್ರಮಾಣ ಒದಗಿಸಬೇಕು. ವೇತನ ಆಯೋಗದ ಶಿಫಾರಸ್ಸುಗಳಂತೆ ಪ್ರತಿ ವಲಯಗಳ ವೇತನದ ನಡುವೆ ಶೇ. 2.5 ರಷ್ಟು ವೇತನ ವ್ಯತ್ಯಾಸ ಹಾಗೂ ಪ್ರತಿ ಕೌಶಲ್ಯತೆಯ ನಡುವೆ ಶೇ. 15ರಷ್ಟು ವೇತನ ವ್ಯತ್ಯಾಸದೊಂದಿಗೆ ವೇತನ ದರವನ್ನು ನಿಗದಿಪಡಿಸಬೇಕು. ಸರಳ ಚಟುವಟಿಕೆ ನಡೆಸುವ ಸರಾಸರಿ ಭಾರತೀಯ ವಯಸ್ಕರಿಗೆ ಡಾ.ಅಕ್ರಾಯ್ಡಾ ಶಿಫಾರಸ್ಸು ಮಾಡಿರುವ ರೀತಿಯಲ್ಲಿ 2700 ಕ್ಯಾಲೊರಿ ನಿವ್ವಳ ಆಹಾರ ಸೇವನೆಯು ಕನಿಷ್ಠ ಆಹಾರ ಅವಶ್ಯಕತೆಯಾಗಬೇಕು ಎಂದು ಸಂಘಟನಕಾರರು ಆಗ್ರಹಿಸಿದರು. ಬಳಿಕ ಕಾರ್ಮಿಕ ಇಲಾಖೆ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.