ಜಿಲ್ಲೆ

ಒಳಮೀಸಲಾತಿ ಜಾರಿಗೆ ಆಗ್ರಹ

ಬಳ್ಳಾರಿ : ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಜಾತಿ ಹಾಗೂ ಉಪಜಾತಿಗಳ ಸಂಘಟನೆಗಳ ಒಕ್ಕೂಟದಿಂದ ಇಲ್ಲಿನ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಮನೆಯ ಮುಂಭಾಗದಲ್ಲಿ ತಮಟೆ ಬಾರಿಸಿ ಶನಿವಾರ ಪ್ರತಿಭಟನೆ ನಡೆಸಿದರು.

ಸುಪ್ರೀಂಕೋರ್ಟ ಒಳಮೀಸಲಾತಿ ಜಾರಿ ಮಾಡಲು ದೇಶದ ಎಲ್ಲ ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಿದೆ. ಅದರೆ, ರಾಜ್ಯ ಸರ್ಕಾರ ರಾಜ್ಯದಲ್ಲಿ ಒಳಮೀಸಲಾತಿಯನ್ನು ಜಾರಿ ಮಾಡದೇ ಆಯೋಗ ರಚಿಸಿ ವಿಳಂಬ ಧೋರಣೆ ಅನುಸರಿಸುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿ ಒಳ ಮೀಸಲಾತಿ ಜಾರಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ಕೊಟ್ಟಿದ್ದರು. ಆದರೆ, ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಈವರೆಗೂ ಜಾರಿ ಮಾಡಿಲ್ಲ. ಅನಗತ್ಯವಾಗಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು. ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸುವ ಸಲುವಾಗಿ ತಮಟೆ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಪ್ರತಿಭಟನಕಾರರು ತಿಳಿಸಿದರು. ಬಳಿಕ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿ ಶಾಸಕರ ಆಪ್ತರಿಗೆ ಮನವಿ ಸಲ್ಲಿಸಿದರು.