ಜಿಲ್ಲೆ

ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹ

ಬಳ್ಳಾರಿ : ಪಾಲಿಕೆಯ ಅಧಿಕಾರಿ ಮತ್ತು ನೌಕರರು ನ್ಯಾಯಯುತ ಬೇಡಿಕೆ ಈಡೇರಿಸಲು ಒತ್ತಾಯಿಸಿ, ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಯಿತು.

ಪಾಲಿಕೆಯ ಆರೋಗ್ಯ ಅಧಿಕಾರಿ ಮುನಾಫ್ ಪಟೇಲ್ ಮಾತನಾಡಿ, 7ನೇ ವೇತನ ಆಯೋಗದ ಸೌಲಭ್ಯವನ್ನು ರಾಜ್ಯ ಸರ್ಕಾರ ನೌಕರರಿಗೆ ವಿಸ್ತರಿಸಿರುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳು, ನೌಕರರಿಗೆ ಯಥಾವತ್ತಾಗಿ ಸರ್ಕಾರ ಆರ್ಥಿಕ ಇಲಾಖೆಯಿಂದಲೇ ಅನುದಾನ ಬಿಡುಗಡೆ ಮಾಡಬೇಕು ಎಂದರು.

ರಾಜ್ಯ ಮಹಾನಗರ ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿ ಮಾಡಿ, ಕರಡು ಅಧಿಸೂಚನೆ ಪ್ರಕಟಿಸಬೇಕು. ರಾಜ್ಯ ಸರ್ಕಾರಿ ನೌಕರರಿಗೆ ಜಾರಿ ಮಾಡಿರುವ ಕೆಜಿಐಡಿ, ಜಿಪಿಎಸ್ ಸೌಲಭ್ಯವನ್ನು ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿಗಳು, ನೌಕರರಿಗೆ ಜಾರಿಗೊಳಿಸಬೇಕು. ಸುಮಾರು ವರ್ಷಗಳಿಂದ ನಾನಾ ವೃಂದದ ಹುದ್ದೆಗಳನ್ನು ಮುಂಬಡ್ತಿ ಪಡೆಯಲು ವಂಚಿತರಾಗಿರುವುದರಿಂದ ಕೂಡಲೇ ಮುಂಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.

ಈ ಬೇಡಿಕೆ ಬಗ್ಗೆ ರಾಜ್ಯ 10 ಮಹಾನಗರ ಪಾಲಿಕೆಯ ಅಧಿಕಾರಿಗಳು, ನೌಕರರು ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಹಲವು ಬಾರಿ ನಗರಾಭಿವೃದ್ಧಿ ಇಲಾಖೆಯ ಸಚಿವರಿಗೆ, ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಸಕರಾತ್ಮಕ ಸ್ಪಂದನೆ ದೊರೆತಿಲ್ಲ. ಅದಕ್ಕಾಗಿ ಸಂಘದ ರಾಜ್ಯ ಮುಖಂಡರ ಕರೆಯಂತೆ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.