ಜಿಲ್ಲೆ

ರೈಲು ಹಳಿ ಮಾರ್ಗ ಬದಲಾವಣೆಗೆ ಆಗ್ರಹ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಜಿಂದಾಲ್ ಸಂಸ್ಥೆಗಾಗಿ ಹದ್ದಿನಗುಂಡಿನಿಂದ ಹಲಕುಂದಿವರೆಗೆ ನೂತನವಾಗಿ ನಿರ್ಮಾಣಗೊಳ್ಳಲಿರುವ ರೈಲು ಹಳಿ ಮಾರ್ಗವನ್ನು ಬದಲಾಯಿಸುವಂತೆ ಆಗ್ರಹಿಸಿ ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಅಂದ್ರಾಳ್, ಬಿ.ಗೋನಾಳ್,ಬೊಬ್ಬಕುಂಟೆಯ ನೂರರು ರೈತರು ಸೋಮವಾರ ಪ್ರತಿಭಟಿಸಿದರು.

ಈಗಾಗಲೇ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸರ್ವೆ ಕಾರ್ಯ ನಡೆಯುತ್ತಿದ್ದು, ಈ ಪ್ರದೇಶ ನಗರ ವ್ಯಾಪ್ತಿಗೆ ಒಳಪಡುತ್ತದೆ. ಇದರಿಂದ ಕೇವಲ ಒಂದು ಅಥವಾ ಎರಡು ಎಕರೆ ಅದಕ್ಕಿಂತಲೂ ಕಡಿಮೆ ವಿಸ್ತೀರ್ಣದ ತುಂಡು ಭೂಮಿ ಹೊಂದಿದ್ದು ಇದುವೇ ಜೀವನಧಾರವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಸಣ್ಣ ರೈತರು ಕೂಡ ಜೀವನ ನಡೆಸುತ್ತಿದ್ದಾರೆ. ಈ ಪ್ರದೇಶದಲ್ಲಿ ರೈಲು ಮಾರ್ಗ ಹಾದು ಹೋದರೆ ಜೀವನೋಪಾಯಕ್ಕೆ ಸಮಸ್ಯೆಯಾಗಲಿದೆ. ಈಗಾಗಲೇ ಜಿಲ್ಲೆಯ ಸುತ್ತಮುತ್ತ ರಿಂಗ್ ರಸ್ತೆ, ಬೈಪಾಸ್ ರಸ್ತೆಗೆ ಇರುವ ಜಮೀನು ಸರ್ಕಾರ ನೀಡಿ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಅದಕ್ಕಾಗಿ ಗ್ರಾಮೀಣ ಪ್ರದೇಶವಾದ ಹಗರಿ ರೈಲ್ವೆ ನಿಲ್ದಾಣ ದಾಟಿ ನಂತರ ಹೊಸ ರೈಲು ಹಳಿಯನ್ನು ಓಬಳಾಪುರ ಗ್ರಾಮದ ಹತ್ತಿರ ರೈಲ್ವೆ ಟ್ರಾೃಕ್‌ಗೆ ಹೊಂದಾಣಿಕೆಯಾಗುವಂತೆ ಟ್ರಾೃಕ್ ಮಾರ್ಗವನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಡಳಿತ ಮೂಲಕ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದರು.