ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ
ಬಳ್ಳಾರಿ: ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರಲು ಸರ್ಕಾರದ ಯೋಜನೆಗಳ ಜತೆಗೆ ಕುಟುಂಬದ ಸಹಕಾರವೂ ಅಗತ್ಯ ಎಂದು ಡಿಸಿಪಿಒ ಸಯ್ಯದ್ ಚಾಂದ್‌ಪಾಷ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಸ್ನೇಹ ಸಂಸ್ಥೆ ಬುಧವಾರ ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಕ್ಸೊ ಕಾಯ್ದೆ ಹಾಗೂ ಕರ್ನಾಟಕ ದೇವದಾಸಿ ಸಮರ್ಪಣ ನಿಷೇಧ ಕಾಯ್ದೆ ಕುರಿತು ಅಂಗನವಾಡಿ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೊದಲ ಬಾರಿ ನಗರದಲ್ಲಿ ಬಾಲ್ಯ ವಿವಾಹ ಕಾರಣಕ್ಕೆ 11 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಲಾಕ್‌ಡೌನ್ ವೇಳೆ 262 ಬಾಲ್ಯ ವಿವಾಹ ತಡೆಯಲಾಗಿದ್ದು, ಈ ಸಂಬಂಧ 37 ಪ್ರಕರಣ ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ಮುಖ್ಯವಾಗಿ ಬಾಲ್ಯವಿವಾಹ ತಡೆಯಲು ಹುಡುಗಿಯರೇ ಮುಂದೆ ಬರಬೇಕು. ಇದು ಸಾಧ್ಯವಾದರೆ ಸಂಪೂರ್ಣವಾಗಿ ಬಾಲ್ಯವಿವಾಹ ತಡೆಯಬಹುದು. ಹೆಣ್ಣು ಮಗುವಿಗೆ ಸರ್ಕಾರ ಪದವಿವರೆಗೆ ಉಚಿತ ಶಿಕ್ಷಣ ನೀಡುತ್ತಿದ್ದು, ಅರ್ಹರು ಇದರ ಸದ್ಬಳಕೆಗೆ ಮುಂದಾಗಬೇಕು ಎಂದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಮೈದೂರು ಮಾತನಾಡಿ, ಪ್ರತಿ ಸಮಸ್ಯೆಗೂ ಪರಿಹಾರವಿದ್ದು, ಅದನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಕಾನೂನು ಕೂಡ ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗೆ ಸಹಕಾರಿಯಾಗಿದೆ. ಮಕ್ಕಳಿಗೆ ಅಗುವ ತೊಂದರೆ ತಡೆಯಲು ಮಕ್ಕಳ ರಕ್ಷಣಾ ಸಹಾಯವಾಣಿ 1098ಗೆ ಕರೆ ಮಾಡಿ ಎಂದು ತಿಳಿಸಿದರು.
ವಕೀಲೆ ತ್ರಿವೇಣಿ ಪತ್ತಾರ್ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿದರು. ಪ್ರಮುಖರಾದ ನೀಲಾವತಿ, ಶಿವಗಂಗಮ್ಮ, ಎಚ್. ಗೀತಾ, ಲಕ್ಷ್ಮೀದೇವಿ, ಇಂದ್ರದೇವಿ, ಕೆ. ಬಸಮ್ಮ, ಸುಕಾನ್ಯ, ಪಿ. ಸುಮಲತ, ಶಶಿರೇಖಾ ಇತರರಿದ್ದರು.