ಜಿಲ್ಲೆ

ಕಾನೂನಿನ ಅರಿವು ಮೂಡಿಸಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಸಮಾಜದಲ್ಲಿ ವಿವಿಧ ರೀತಿ ವಂಚಿತರಾದವರಿಗೆ ಕಾನೂನಿನ ಅರಿವು ಮೂಡಿಸುವುದರ ಜತೆಗೆ ನ್ಯಾಯ ಒದಗಿಸುವ ಸಮಾಜಮುಖಿ ಕೆಲಸದಲ್ಲಿ ಅರೆಕಾಲಿಕ ಸ್ವಯಂ ಸೇವಕರು ತೊಡಗಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ನ್ಯಾ.ಕೆ.ಜಿ. ಶಾಂತಿ ಹೇಳಿದರು.

ನಗರದ ಹೊಸ ನ್ಯಾಯಾಲಯ ಸಂಕೀರ್ಣ ಸಭಾಂಗಣದಲ್ಲಿ ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದೊಂದಿಗೆ ಜಿಲ್ಲೆಯ ಅರೆಕಾಲಿಕ ಸ್ವಯಂ ಸೇವಕರಿಗೆ ನಡೆದ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎನ್ನುವ ಮಾತಿನಂತೆ ನಾಗರಿಕರು ಸುಗಮವಾಗಿ ಜೀವನ ನಡೆಸಲು ತಮ್ಮ ದೈನಂದಿನ ಜೀವನದಲ್ಲಿ ಕಾನೂನು ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಸಹ ಕಾನೂನು-ಕಾಯ್ದೆಗಳ ಅರಿವು ಹೊಂದಬೇಕು ಎಂದರು.

ಬಾಲ್ಯ ವಿವಾಹ, ವರದಕ್ಷಿಣೆ ಕಿರುಕುಳ, ಬಾಲ ಕಾರ್ಮಿಕ ಪದ್ಧತಿ, ಪೋಕ್ಸೋ ಕಾಯ್ದೆ, ಮಾದಕ ವ್ಯಸನ ಸೇರಿದಂತೆ ಇನ್ನಿತರೆ ಕಾನೂನು ಬಾಹಿರ ಪ್ರಕರಣಗಳು ಕಂಡುಬಂದಲ್ಲಿ ಅರೆ ಕಾಲಿಕ ಸ್ವಯಂ ಸೇವಕರು ಮತ್ತು ಸಾರ್ವಜನಿಕರೂ ಸಹ ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ಮಾಹಿತಿ ರವಾನಿಸಿ, ಅನ್ಯಾಯ ಹಾಗೂ ದೌರ್ಜನ್ಯ ತಡೆಗಟ್ಟುವ ಕಾರ್ಯ ನಿರ್ವಹಿಸಬೇಕು ಎಂದರು.

ಸಂವಿಧಾನದಡಿ ಇರುವ ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಸಾರ್ವಜನಿಕರು ಹಕ್ಕುಗಳ ಸದುಪಯೋಗ ಪಡೆದುಕೊಳ್ಳುವುದರೊಂದಿಗೆ ತಮಗಿರುವ ಕರ್ತವ್ಯಗಳ ಬಗ್ಗೆ ಮನದಟ್ಟಣೆ ಮಾಡಿಕೊಂಡು ನ್ಯಾಯಯುತ ಬಾಳ್ವೆ ನಡೆಸಬೇಕು ಎಂದು ಹೇಳಿದರು.

ನ್ಯಾಯಧೀಶ ರಾಜೇಶ್.ಎನ್ ಹೊಸಮನೆ ಮಾತನಾಡಿ, ಯಾವುದೇ ಅಪೇಕ್ಷೆ ಬಯಸದೇ ಸ್ವಯಂ ಪ್ರೇರಿತರಾಗಿ ಕಾರ್ಯನಿರ್ವಹಿಸುವ ಅರೆ ಕಾಲಿಕ ಕಾನೂನು ಸ್ವಯಂ ಸೇವಕರು ಸಮಾಜದ ಒಳಿತಿಗಾಗಿ ಶ್ರಮಿಸಿ, ಅರ್ಹರಿಗೆ ನ್ಯಾಯ ಒದಗಿಸುವ ಕೆಲಸ ನಿರ್ವಹಿಸಬೇಕು ಎಂದರು.