ಬಳ್ಳಾರಿಯ ಕಾಟನ್ ಮಿಲ್‌ವೊಂದರಲ್ಲಿ ಸಂಗ್ರಹಿಸಿರುವ ಹತ್ತಿ. 
ಜಿಲ್ಲೆ

40 ಕಾಟನ್ ಮಿಲ್‌ಗಳು ಬಂದ್

ಹತ್ತಿ ಪೂರೈಕೆಯಲ್ಲಿ ಕುಸಿತ ಗಣಿನಾಡಿನಲ್ಲಿ ಕೇವಲ ಏಳು ಕಾರ್ಯನಿರ್ವಹಣೆ

ತಾಳೂರು ಎಸ್.ಎರ‌್ರಿಸ್ವಾಮಿ

ಬಳ್ಳಾರಿ: ಕಳೆದ ಎರಡು ವರ್ಷದಿಂದ ಸಮರ್ಪಕವಾಗಿ ಹತ್ತಿ ಪೂರೈಕೆ ಆಗದ ಕಾರಣ ನಗರದ 40 ಕಾಟನ್ ಮಿಲ್‌ಗಳು ಸ್ಥಗಿತಗೊಂಡಿವೆ.

ಕಲಬೆರಕೆ ಬಿತ್ತನೆ ಬೀಜಗಳು, ಅತಿಯಾದ ಕೀಟನಾಶಕ, ದುಬಾರಿ ಗೊಬ್ಬರ ಬಳಕೆ ಒಂದಡೆಯಾದರೆ, ಬೀಕರ ಬರಗಾಲ ಹಾಗೂ ಕೀಟಗಳ ಕಾಟದಿಂದ ಹೂಡಿದ ಬಂಡವಾಳ ವಾಪಸ್ ಬಾರದೇ ರೈತರು ಹತ್ತಿ ಬೆಳೆಯಲು ಹಿಂದೇಟು ಹಾಕಿದ ಪರಿಣಾಮ ಕಾಟನ್ ಮಿಲ್‌ಗಳಿಗೆ ಸಂಕಷ್ಟ ಎದುರಾಗಿದೆ.

ಸಮರ್ಪಕವಾಗಿ ಹತ್ತಿ ಬಾರದೆ ಇರುವುದರಿಂದ ಕಾಟನ್ ಮಿಲ್ ಮಾಲೀಕರು ಬಹುತೇಕ ಮಿಲ್‌ಗಳನ್ನು ಬಂದ್ ಮಾಡಿದ್ದಾರೆ. ಜಿಲ್ಲೆಯಲ್ಲಿ ಕಳೆದ ಕೆಲ ವರ್ಷದ ಹಿಂದೆ 65 ಕಾಟನ್ ಮಿಲ್‌ಗಳು ಕಾರ್ಯನಿರ್ವಹಿಸುತ್ತಿದ್ದವು. ಜಿಲ್ಲೆ ಹಾಗೂ ಆಂಧ್ರದ ನಾನಾ ಭಾಗಗಳಿಂದ ನೂರಾರು ಕ್ವಿಂಟಾಲ್ ಹತ್ತಿ, ಕಾಟನ್ ಮಿಲ್‌ಗಳಿಗೆ ಸೇರುತ್ತಿತ್ತು. ಆದರೆ, ಎರಡು ವರ್ಷದಿಂದ ಕಳಪೆ ಬೀಜ, ರಸಗೊಬ್ಬರ ಪೂರೈಕೆ ಹಾಗೂ ಬರಗಾಲದಿಂದ ಸಮರ್ಪಕವಾಗಿ ಹತ್ತಿ ಪೂರೈಕೆ ಆಗುತ್ತಿಲ್ಲ. ಇಲ್ಲಿನ 17 ಮಿಲ್‌ಗಳು ಸಾಲದ ಸುಳಿಯಿಂದ ಮುಚ್ಚಿದರೆ, ಇನ್ನೂ 40 ಕಾಟನ್ ಮಿಲ್‌ಗಳು ಹತ್ತಿಯಿಲ್ಲದೆ ಬಂದ್ ಆಗಿವೆ. ಆಂಧ್ರದಿಂದ ಕೆಲವರು ತಂದು ಮಾರಾಟ ಮಾಡುವುದರಿಂದ ಕೇವಲ ಏಳು ಮಿಲ್‌ಗಳು ಮಾತ್ರ ನಡೆಯುತ್ತಿವೆ. ಅವು ಕೂಡ ಅತಂತ್ರ ಸ್ಥಿತಿಯಲ್ಲಿವೆ.

ಪ್ರತಿ ವರ್ಷ ಅಕ್ಟೋಬರ್‌ನಲ್ಲಿ ಹತ್ತಿ ಸೀಸನ್ ಇರುತ್ತದೆ. ಆದರೆ, ಕಳೆದ ಅಕ್ಟೋಬರ್‌ನಲ್ಲಿ ಹೊಸ ಹತ್ತಿ ಮಾರುಕಟ್ಟೆಗೆ ಬಂದಿಲ್ಲ. ಈ ವರ್ಷವಾದರೂ ಚೇತರಿಕೆ ಕಾಣುತ್ತದೆ ಎಂಬ ವಿಶ್ವಾಸವಿತ್ತು. ಸರ್ವೇ ಪ್ರಕಾರ ಜಿಲ್ಲೆಯಲ್ಲಿ ಇನ್ನೂ ಹತ್ತಿ ಬಿತ್ತನೆ ನಡೆದಿಲ್ಲ. ಅಲ್ಲದೆ ಕಳೆದ ಬಾರಿಗಿಂತ ಈ ಸಲ ಬಿತ್ತನೆ ಪ್ರಮಾಣ ಗಣನೀಯವಾಗಿ ಇಳಿಕೆಯಾಗಲಿದೆ ಎನ್ನಲಾಗಿದೆ.

ಕೈಸುಟ್ಟುಕೊಳ್ಳಲು ರೈತರಿಗೆ ಇಷ್ಟವಿಲ್ಲ

ಬಳ್ಳಾರಿ ಜಿಲ್ಲೆ ಹಾಗೂ ಆಂಧ್ರದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಹತ್ತಿ ಬೆಳೆಯುತ್ತಿದ್ದರು. ಈಗ ಹತ್ತಿ ಬಿತ್ತನೆ ಪ್ರದೇಶ ತಗ್ಗಿದೆ. ಲಕ್ಷಾಂತರ ರೂ. ವ್ಯಯಿಸಿ ಹತ್ತಿ ಬೆಳೆದು ಕೈಸುಟ್ಟುಕೊಳ್ಳಲು ಇಷ್ಟವಿಲ್ಲ. ಹೀಗಾಗಿ ರೈತರು ಹತ್ತಿ ಬದಲಾಗಿ ಸರ್ಕಾರ ಬೆಂಬಲ ಬೆಲೆ ನೀಡುವ ಮೆಕ್ಕೆಜೋಳ, ಬಿಳಿ ಜೋಳ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ.

ಎರಡ್ಮೂರು ಕ್ವಿಂಟಾಲ್ ಇಳುವರಿ ಬರುತ್ತಿಲ್ಲ

ಮೇದಿಂದ ಆಗಸ್ಟ್‌ವರೆಗೆ ಚಿತ್ರದುರ್ಗ, ರಾಂಪುರ, ಪಾವಗಡ ಸೇರಿ ವಿವಿಧ ಜಿಲ್ಲೆಗಳಲ್ಲಿ ಬೇಸಿಗೆ ಹತ್ತಿ ಬೆಳೆಯಲಾಗುತ್ತಿತ್ತು. ಈ ಬಾರಿ ಅಲ್ಲಿಯೂ ಹತ್ತಿ ಬೆಳೆದಿಲ್ಲ. ಇನ್ನೆರಡ್ಮೂರು ತಿಂಗಳು ಹೀಗಾದರೆ ಬಂದ್ ಮಾಡಿದ ಮಿಲ್‌ಗಳನ್ನು ಮಾರಾಟ ಮಾಡಿಕೊಂಡು ಬ್ಯಾಂಕ್‌ಗಳಿಗೆ ಸಾಲ ಕಟ್ಟಬೇಕಾಗುತ್ತದೆ. ಈ ಹಿಂದೆ ಎಕರೆಗೆ 20-30 ಕ್ವಿಂಟಾಲ್ ಬರುತ್ತಿತ್ತು. ಈಗ ಕೇವಲ ಎರಡ್ಮೂರು ಕ್ವಿಂಟಾಲ್ ಇಳುವರಿ ಬರುತ್ತಿದೆ. ವಾತಾವರಣ ಬದಲಾವಣೆಯಿಂದ ಇಳುವರಿ ಕಡಿಮೆಯಾಗಿಲ್ಲ. ಕಳಪೆ ಬೀಜಗಳಿಂದ ಕುಂಠಿತಗೊಂಡಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮವಹಿಸಿಲ್ಲ ಎಂದು ರೈತರೊಬ್ಬರು ಬೇಸರ ವ್ಯಕ್ತಪಡಿಸಿದರು.