ಜಿಲ್ಲೆ

ಕರೊನಾ ಪರಿಹಾರ ನೀಡದ ಸರ್ಕಾರ: ಬಳ್ಳಾರಿಯಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪ

ಬಳ್ಳಾರಿ: ದೇಶದ ಆರ್ಥಿಕ ವ್ಯವಸ್ಥೆ ಕುಸಿತವಾಗಿದೆ. ಗಡಿ ಭಾಗದ ಜನರಿಗೆ ಭದ್ರತೆ ಮತ್ತು ಯುವಕರಿಗೆ ಉದ್ಯೋಗ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿವೆ ಎಂದು ಮಾಜಿ ಸಂಸದ, ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕರೊನಾದಿಂದ 2020 ರಾಜ್ಯ ಮತ್ತು ರಾಷ್ಟಕ್ಕೆ ಕರಾಳ ವರ್ಷವಾಗಿದೆ. ಕರೊನಾಕ್ಕೆ ಒಂದು ಕೋಟಿ ಜನ ಸೋಂಕಿತರಾದರೆ, 1.5 ಲಕ್ಷ ಜನ ಮೃತಪಟ್ಟಿದ್ದಾರೆ. ಚೀನಾದಲ್ಲಿ ಕರೊನಾ ಪ್ರಕರಣ ದಾಖಲಾದಗಲೇ ಪ್ರಧಾನಿ ಮೋದಿ ಎಚ್ಚೆತ್ತುಕೊಂಡು ವಿಮಾನ ಸಂಚಾರ ನಿಲ್ಲಿಸಿದ್ದರೆ ಸಾವು-ನೋವು ಸಂಭವಿಸುತ್ತಿರಲಿಲ್ಲ.

ಕರೊನಾ ಸಂಕಷ್ಟದಲ್ಲಿ ಕೇಂದ್ರ ಸರ್ಕಾರ 21 ಲಕ್ಷ ಕೋಟಿ ರೂ. 6 ಹಂತದಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿದೆ. ಆದರೆ, ಈವರೆಗೆ ಫಲಾನುಭವಿಗಳಿಗೆ ಸಿಕ್ಕಿಲ್ಲ. ನೇಪಾಳ, ಚೀನಾ, ಪಾಕಿಸ್ತಾನ ಗಡಿಯಲ್ಲಿನ ಜನರಿಗೆ ಭದ್ರತೆ ಇಲ್ಲ. ಯುವಕರಿಗೆ ಉದ್ಯೋಗ ಒದಗಿಸುವಲ್ಲಿ ವಿಫಲವಾಗಿದೆ. ಇಂತ ವಿಷಮ ಪರಿಸ್ಥಿತಿಯಲ್ಲಿ ರೈತ ವಿರೋಧಿ ಕಾನೂನು ಜಾರಿ ಮಾಡುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಹಿರಿಯರಿಗೆ ಮಾಸಾಶನ, ಅತಿಥಿ ಉಪನ್ಯಾಸಕರಿಗೆ ಸಂಬಳ ನೀಡಿಲ್ಲ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಸಂಕಷ್ಟ ಅನುಭವಿಸಿದ ಜನರಿಗೆ 35 ಸಾವಿರ ಕೋಟಿ ಪರಿಹಾರ ನೀಡಿಲ್ಲ ಎಂದು ದೂರಿದ ಅವರು, ದೇಶ ಮತ್ತು ರಾಜ್ಯದಲ್ಲಿ ನಾಯಕತ್ವದ ಕೊರತೆ ಇದೆ ಎಂದರು. ಜಿಲ್ಲಾ ಕಾಂಗ್ರೆಸ್ ಸಮಿತಿ ನಗರ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ಮುಖಂಡರಾದ ಕಿಶೋರ್, ಕುಮಾರಮ್ಮ, ಮಲ್ಲೇಶ್ವರಿ, ಮಂಜುನಾಥ್, ಲೋಕೇಶ್, ಸುರೇಶ್ ಇತರರಿದ್ದರು.