ಬಳ್ಳಾರಿ: ಸಾರಿಗೆ ಸಂಸ್ಥೆಗೆ ಆರ್ಥಿಕ ಹಾನಿ ತಡೆಯಲು ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಲಾಗುವುದು. ನೌಕರರನ್ನು ಸಂಬಳ ರಹಿತ ರಜೆ ಮೇಲೆ ಕಳುಹಿಸುವ ಚಿಂತನೆ ಇಲ್ಲ. ಆದರೆ, ಅನಗತ್ಯ ಹುದ್ದೆಗಳನ್ನು ಗುರುತಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಡಿಸಿಎಂ ಹಾಗೂ ಸಾರಿಗೆ ಲಕ್ಷ್ಮಣ ಸವದಿ ಹೇಳಿದರು.
ಕರೊನಾ ಲಾಕ್‌ಡೌನ್‌ದಿಂದಾಗಿ ಸಾರಿಗೆ ಸಂಸ್ಥೆಗೆ 1,800 ಕೋಟಿ ರೂ. ನಷ್ಟವಾಗಿದೆ. ಬಸ್‌ಗಳ ಸಂಚಾರ ಆರಂಭವಾದ ಬಳಿಕ ನಷ್ಟದ ಪ್ರಮಾಣ ಹೆಚ್ಚಾಗಿದೆ. ಕರೊನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಬಸ್‌ಗಳಲ್ಲಿ ಕಡಿಮೆ ಸಂಖ್ಯೆಯ ಜನರು ಪ್ರಯಾಣಿಸಬೇಕಾಗಿದೆ. ಇದರಿಂದಾಗಿ ಸಂಸ್ಥೆಗೆ ನಿತ್ಯ ಆರು ಕೋಟಿ ರೂ. ನಷ್ಟವಾಗುತ್ತಿದೆ. ಬಸ್‌ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜನರ ಸಂಚಾರ ಆರಂಭವಾದ ಬಳಿಕವಷ್ಟೇ ಆದಾಯ ನಿರೀಕ್ಷಿಸಬಹುದಾಗಿದೆ ಎಂದರು.
ಸಾರಿಗೆ ಸಂಸ್ಥೆ ಸಿಬ್ಬಂದಿಯ ಒಂದು ತಿಂಗಳ ವೇತನಕ್ಕಾಗಿ ಸರ್ಕಾರ 326 ಕೋಟಿ ರೂ. ನೀಡಿದೆ. ಎರಡನೇ ತಿಂಗಳಿಗೆ ಸರ್ಕಾರ ಒಟ್ಟು ವೇತನದ ಅರ್ಧ ಮೊತ್ತ ನೀಡಿದೆ. ಪೂರ್ಣ ವೇತನ ಪಾವತಿ ಮಾಡುವಂತೆ ಸರ್ಕಾರವನ್ನು ಕೋರಲಾಗುವುದು. ರಾಜ್ಯದಲ್ಲಿ ಕೆಂಪು ವಲಯ ಹೊರತುಪಡಿಸಿ ಎಲ್ಲ ಕಡೆ ಬಸ್ ಸಂಚಾರ ಆರಂಭಿಸಲಾಗುವುದು. ಹೊರ ರಾಜ್ಯಗಳಿಗೂ ಕೆಂಪು ವಲಯ ಹೊರತುಪಡಿಸಿ ಬಸ್ ಸಂಚಾರ ಆರಂಭಿಸುವ ಚಿಂತನೆ ಇದೆ ಸಚಿವ ಲಕ್ಷ್ಮಣ ಸವದಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಾಸಕ ಉಮೇಶ ಕತ್ತಿ ನಿವಾಸದಲ್ಲಿ ಶಾಸಕರ ಭೋಜನ ಕೂಟ ವೇಳೆ ರಾಜಕೀಯ ಚರ್ಚೆ ನಡೆದಿರಬಹುದು. ಆದರೆ, ಅದು ಭಿನ್ನಮತವಲ್ಲ. ಬೆಳಗಾವಿ ರಾಜಕೀಯದಿಂದ ಸರ್ಕಾರಕ್ಕೆ ಏನೂ ಆಗಲ್ಲ. | ಲಕ್ಷ್ಮಣ ಸವದಿ, ಡಿಸಿಎಂ ಹಾಗೂ ಸಾರಿಗೆ ಸಚಿವ