ಜಿಲ್ಲೆ

ಬಳ್ಳಾರಿಯಲ್ಲಿ ನಿಯಂತ್ರಣಕ್ಕೆ ಸಿಗದ ಕರೊನಾ; ರಾಜ್ಯದಲ್ಲಿ 10 ಸಾವಿರ ದಾಟಿದ ಎರಡನೇ ಜಿಲ್ಲೆ

ಬಳ್ಳಾರಿ: ಜಿಲ್ಲೆಯಲ್ಲಿ ಕರೊನಾ ಸೋಂಕು ನಿಯಂತ್ರಣಕ್ಕೆ ಸಿಗದಂತೆ ವ್ಯಾಪಿಸುತ್ತಿದೆ. ರಾಜ್ಯದಲ್ಲಿ ಬೆಂಗಳೂರು ನಗರ ಹೊರತುಪಡಿಸಿದರೆ ಜಿಲ್ಲೆಯಲ್ಲಿ ಮಾತ್ರ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಿದೆ.

ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಭಾನುವಾರದವರೆಗೆ 10,371 ಜನರಿಗೆ ಸೋಂಕು ತಗುಲಿದೆ. ಈ ಮೊದಲು ರಾಜ್ಯದಲ್ಲಿ ಮುಂಚೂಣಿಯಲ್ಲಿದ್ದ ಮೈಸೂರು, ಕಲಬುರಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಏಳು ಸಾವಿರ ಪ್ರಕರಣಗಳು ದಾಖಲಾಗಿವೆ.

ಅನ್ಯ ಜಿಲ್ಲೆಗಳಿಗಿಂತ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಮರಣ ಪ್ರಮಾಣ ಕಡಿಮೆ ಎಂಬುದು ಸಮಾಧಾನಕರ ವಿಚಾರ. ಜಿಲ್ಲೆಯಲ್ಲಿ ಭಾನುವಾರದವರೆಗೆ 114 ಜನರು ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ 235, ಧಾರವಾಡದಲ್ಲಿ 193, ಕಲಬುರಗಿಯಲ್ಲಿ 140, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 218 ಜನರು ಪ್ರಾಣ ಕಳೆದುಕೊಂಡಿದ್ದಾರೆ.