ಬಳ್ಳಾರಿ: ಗುತ್ತಿಗೆ ಹಾಗೂ ಹೊರಗುತ್ತಿಗೆ ಮತ್ತು ಸ್ಕೀಮ್ ನೌಕರರ ವೇತನ ಪರಿಷ್ಕರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಎಐಯುಟಿಯುಸಿ ಸಂಘಟನೆ ನೇತೃತ್ವದಲ್ಲಿ ನೂರಾರು ಗುತ್ತಿಗೆ ನೌಕರರು ಗುರುವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕಾರ್ಯದರ್ಶಿ ಎ.ದೇವದಾಸ್ ಮಾತನಾಡಿ, ಇಂದಿನ ವಿಪರೀತ ಬೆಲೆ ಏರಿಕೆ, ಹಣದುಬ್ಬರ ಸಮಸ್ಯೆಗಳ ನಡುವೆ ಕಾರ್ಮಿಕ ಇಲಾಖೆ ಕನಿಷ್ಠ ವೇತನ ಕಾಯ್ದೆ 1948 ಅಡಿಯಲ್ಲಿ ವಿವಿಧ ಶೆಡ್ಯೂಲ್ ಅಡಿ ಕೊಡುತ್ತಿರುವ ವೇತನ ಯಾವುದಕ್ಕೂ ಸಾಲದಾಗಿದೆ. ಐಎಲ್‌ಒ ಮಾನದಂಡ ಆಧರಿಸಿ, 2015ರಲ್ಲಿ ಜರುಗಿದ 46ನೇ ಐಎಲ್‌ಸಿ ಶಿಫಾರಸಿನ ಅನ್ವಯ ಎಲ್ಲ ಗುತ್ತಿಗೆ ಹೊರಗುತ್ತಿಗೆ ಹಾಗೂ ಸ್ಕೀಮ್ ನೌಕರರನ್ನು ಸಹ ಈ ಕನಿಷ್ಠ ವೇತನ ಅಡಿಯಲ್ಲಿ ತರಬೇಕು. ಹಾಗೆಯೇ ಐಎಲ್‌ಒ ಸೂಚಿಸಿರುವ ಮಾನದಂಡದ ಪ್ರಕಾರ ಅವರಿಗೆ ಕನಿಷ್ಠ ವೇತನವನ್ನು 25,000 ರೂ. ನಿಗದಿಪಡಿಸಬೇಕು. ಅನೇಕ ಬಾರಿ ಈ ನೌಕರರು, ಸ್ಕೀಮ್ ಕಾರ್ಯಕರ್ತೆಯರು ವೇತನ ಹೆಚ್ಚಳ ಮಾಡುವಂತೆ ಕೇಳುತ್ತಿದ್ದರೂ ಅದನ್ನು ಸರ್ಕಾರಗಳು ಕಡೆಗಣಿಸುತ್ತಾ ಬಂದಿರುವುದು ಅತ್ಯಂತ ಶೋಚನೀಯ ಎಂದರು.
ಮುಖ್ಯಮಂತ್ರಿ, ಸಚಿವರು ಹಾಗೂ ಎಲ್ಲ ಶಾಸಕರ ವೇತನ ಶೇ.50 ಹೆಚ್ಚಳ ಮಾಡಿಕೊಂಡಿರುವುದಲ್ಲದೆ, ಪ್ರತಿ 5 ವರ್ಷಕ್ಕೊಮ್ಮೆ ಯಾವುದೇ ಚರ್ಚೆಯಿಲ್ಲದೆ ಪರಿಷ್ಕರಣೆ ಮಾಡಬೇಕೆಂದು ತೀರ್ಮಾನಿಸಿರುವುದು ಅತ್ಯಂತ ಅಸಮರ್ಥನೀಯ. ದುಡಿಯುವವರ ವೇತನ ಹೆಚ್ಚಿಸಲು ಬೊಕ್ಕಸದಲ್ಲಿ ಹಣವಿಲ್ಲ ಎನ್ನುವವರು, ತಮ್ಮ ವೇತನ ಮಾತ್ರ ಹೆಚ್ಚಿಸಿಕೊಳ್ಳಲು ಹಿಂದೆ-ಮುಂದೆ ನೋಡದಿರುವುದು ಅತ್ಯಂತ ವಿರೋಧಾಭಾಸವಾಗಿದೆ ಎಂದರು.
ವಿವಿಧ ಸಂಘಟನೆಗಳ ಮುಖಂಡರಾದ ಎ.ಶಾಂತಾ, ಡಾ.ಪ್ರಮೋದ್, ನಾಗರತ್ನಾ, ಸುರೇಶ್, ಶೇಖರ್ ನಾಯಕ, ಶಂಕರ್, ಲಕ್ಷ್ಮೀ, ಹೊನ್ನೂರ್ ಬಿ, ಶಂಕ್ರಪ್ಪ, ಕಾಮಾಕ್ಷಿ ಇತರರಿದ್ದರು.