ಜಿಲ್ಲೆ

ಗ್ರಾಹಕರು ಹಕ್ಕುಗಳ ಮಾಹಿತಿ ಹೊಂದಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ; ಮಾರಾಟಗಾರರ ಜತೆ ವ್ಯವಹರಿಸುವ ಪ್ರತಿಯೊಬ್ಬ ಗ್ರಾಹಕರು ತಮಗಿರುವ ಹಕ್ಕುಗಳ ಬಗ್ಗೆ ಮಾಹಿತಿ ಹೊಂದಬೇಕು ಎಂದು ಡಿಸಿ ಪ್ರಶಾಂತ ಕುಮಾರ್ ಮಿಶ್ರಾ ಹೇಳಿದರು.

ನಗರದ ನೂತನ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದೊಂದಿಗೆ ಸುಸ್ಥಿರ ಜೀವನಶೈಲಿಗಳಿಗೆ ಕೇವಲ ಪರಿವರ್ತನೆ ಎಂಬ ಘೋಷವಾಕ್ಯದಡಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಧುನಿಕ ತಂತ್ರಜ್ಞಾನ ಅಭಿವೃದ್ಧಿಯಾದಂತೆ ನಾವು ಅದರ ಅನುಗುಣವಾಗಿ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಗ್ರಾಹಕರು ತಾವು ಖರೀದಿಸುವ ವಸ್ತುಗಳ ಗುಣಮಟ್ಟ, ಪ್ರಮಾಣದ ಬಗ್ಗೆ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಹಕರು ಮಾರಾಟಗಾರರಿಂದ ಮೋಸ, ವಂಚನೆ ಅಥವಾ ಸಮಸ್ಯೆ ಉಂಟಾದಲ್ಲಿ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ದೂರು ನೀಡಿ ಪರಿಹಾರ ಕಂಡುಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಮಾತನಾಡಿ, ಗ್ರಾಹಕರು ಪ್ರತಿಯೊಂದು ವಸ್ತುವನ್ನು ಖರೀದಿ ಮಾಡುವಾಗ ಎಚ್ಚರ ವಹಿಸಬೇಕು. ಮುಂಬರುವ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯು ವರ್ತಕರ ಹಾಗೂ ಗ್ರಾಹಕರ ಮಧ್ಯೆ ವಂಚನೆಯಾಗದಂತೆ ಕಾರ್ಯ ನಿರ್ವಹಿಸಲು ಅಭಿವೃದ್ಧಿ ಪಡಿಸುತ್ತಿದ್ದು, ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ತಂತ್ರಜ್ಞಾನ ಅಭಿವೃದ್ಧಿಯಾದಂತೆ, ಮಾನವ ರಹಿತ ಯಂತ್ರಗಳೂ ಕಾರ್ಯ ನಿರ್ವಹಿಸಬಹುದಾದಂತಹ ವಾತಾವರಣವು ಸೃಷ್ಟಿಯಾಗಲಿದೆ. ಇವುಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಇಲ್ಲದಿದ್ದಲ್ಲಿ ಮಾರಕವಾಗಬಹುದು ಎಂದು ಅಭಿಪ್ರಾಯ ಪಟ್ಟರು.

ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಜಿಲ್ಲಾಧ್ಯಕ್ಷ ಎನ್.ತಿಪ್ಪೇಸ್ವಾಮಿ ಮಾತನಾಡಿ, ಗ್ರಾಹಕರು ತಾವು ಕೊಂಡುಕೊಳ್ಳುವ ವಸ್ತುಗಳಲ್ಲಿ ಯಾವುದೇ ರೀತಿಯ ಮೋಸವಾದಾಗ ಮತ್ತು ತಮಗಾದ ಅನ್ಯಾಯದ ವಿರುದ್ಧ ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಂಡು, ತಮಗಿರುವ ಗ್ರಾಹಕರ ಹಕ್ಕುಗಳ ಪರವಾಗಿ ಧ್ವನಿಯೆತ್ತಿ ಕಾನೂನಾತ್ಮಕವಾಗಿ ನ್ಯಾಯ ಪಡೆದುಕೊಳ್ಳಬಹುದಾಗಿದೆ ಎಂದರು.

ಅಭಿವೃದ್ಧಿ ಹೊಂದಿದ ತಂತ್ರಜ್ಞಾನದಲ್ಲಿ ಗ್ರಾಹಕರ ಹಕ್ಕುಗಳಿಗೆ ಚ್ಯುತಿ ಉಂಟಾದಾಗ ಇರುವ ಗ್ರಾಹಕರ ಹಕ್ಕುಗಳ ಬಗ್ಗೆ ಜನಸಾಮಾನ್ಯರಿಗೆ, ಸಾರ್ವಜನಿಕರಿಗೆ, ಗ್ರಾಹಕರಿಗೆ ಮಾಹಿತಿ ಒದಗಿಸುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ, ವರ್ತಕರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ತೂಕ ಮತ್ತು ಅಳತೆ ಕುರಿತ ವಂಚನೆಯ ಜಾಗೃತಿ ಅರಿವು ಮೂಡಿಸಲಾಯಿತು.