ಬಳ್ಳಾರಿ ; ನಗರದಲ್ಲಿ ಸ್ವಚ್ಛತೆ ಕಾಪಾಡುವ ಸಲುವಾಗಿ ನೂತನ ವೈಜ್ಞಾನಿಕ ತಂತ್ರಜ್ಞಾನಧಾರಿತ ಕೋಟ್ಯಾಂತರ ರೂ. ವೆಚ್ಚದಲ್ಲಿ ಮಾಂಸ ಉತ್ಪಾದನೆಯ ಕಸಾಯಿಖಾನೆ ನಿರ್ಮಿಸಲು ಉದ್ದೇಶಿಸಲಾಗಿದೆ.
ಇಲ್ಲಿನ ಜಾಗೃತಿನಗರದಲ್ಲಿನ ಕಸಾಯಿಖಾನೆಯಲ್ಲಿ ಕುರಿ, ಮೇಕೆ ಹಾಗೂ ದೊಡ್ಡ ಪ್ರಾಣಿಗಳ ಮಾಂಸವನ್ನು ಉತ್ಪಾದಿಸಲಾಗತ್ತಿತ್ತು. ಈ ಕಸಾಯಿಖಾನೆಯನ್ನು ಉತ್ತಮವಾಗಿ ನಿರ್ವಹಿಸಲು ಆಧುನಿಕ ಸೌಲಭ್ಯಗಳ ಕೊರತೆಯ ನಡುವೆಯೂ ಸಾರ್ವಜನಿಕರಿಂದ ವಿರೋಧವೂ ವ್ಯಕ್ತವಾಗಿದೆ.
ಕಸಾಯಿಖಾನೆಯಿಂದ ಉಂಟಾಗುವ ಮಾಲಿನ್ಯ ಮತ್ತು ಪ್ರದೇಶದ ಸುತ್ತಮುತ್ತಲಿನ ಆಸ್ತಿಗಳನ್ನು ಖರೀದಿಸಲು ಜನರು ಹಿಂಜರಿಯುತ್ತಿದ್ದಾರೆ. ಸದ್ಯ ವಸತಿ ಪ್ರದೇಶಗಳಲ್ಲಿ ಸುತ್ತವಿರುವ ಕಸಾಯಿಖಾನೆಯಿಂದ ಜನರು ಬೇರಡೆ ಸ್ಥಳಾಂತರಿಸುವಂತೆ ಒತ್ತಾಯ ಕೇಳಿ ಬಂದಿರುವುದರಿಂದ ಹಲವು ತಿಂಗಳಿಂದ ಸ್ಥಗಿತಗೊಳಿಸಲಾಗಿದೆ. ಆದ್ದರಿಂದ, ನಗರದ ಹೊರವಲಯದ ಬೆಳಗಲ್ ಕ್ರಾಸ್‌ನಲ್ಲಿ ಹದಿನಾರು ಎಕರೆ ಪ್ರದೇಶದಲ್ಲಿ ವೈಜ್ಞಾನಿಕ ಹಾಗೂ ಸುಸಜ್ಜಿತ ವಿನ್ಯಾಸವುಳ್ಳ ಕಟ್ಟಡವನ್ನು ನಿರ್ಮಿಸಿ ನೈರ್ಮಲ್ಯ ಕಾಪಾಡಲು ಮಹಾನಗರ ಪಾಲಿಕೆ ಸಜ್ಜಾಗಿದೆ. ಇದರಲ್ಲಿ ಕುರಿ, ಮೇಕೆ ಹಾಗೂ ದೊಡ್ಡದಾದ ಪ್ರಾಣಿಗಳ ಮಾಂಸ ಉತ್ಪಾದನೆಗಾಗಿ 39 ಕೋಟಿ ರೂ. ವೆಚ್ಚದಲ್ಲಿ ಮೂರು ಹಂತದಲ್ಲಿ ಕಸಾಯಿಖಾನೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಏನೆಲ್ಲ ಸೌಲಭ್ಯಗಳು : ಒಂದು ದಿನದಲ್ಲೇ ಆರು ನೂರು ಕುರಿ, ಮೇಕೆ ಹಾಗೂ ದೊಡ್ಡ ಪ್ರಾಣಿಗಳ ಮಾಂಸ ಉತ್ಪಾದಿಸುವ ಸುಸ್ಸಜ್ಜಿತ ಬಹುಮಹಡಿ ಕಟ್ಟಡ ಹಾಗೂ ಎರಡು ಎಕರೆ ಪ್ರದೇಶದಲ್ಲಿ ಬೆಳಕಿನ ವ್ಯವಸ್ಥೆಗಾಗಿ ಸೋಲಾರ್ ಸಿಸ್ಟ್‌ಮ್ ಅಳವಡಿಸಲಾಗುವದು. ಒಂದು ಎಕರೆಯಲ್ಲಿ ಬೃಹತ್ ಕೆರೆ ನಿರ್ಮಾಣ ಹಾಗೂ ಮಾಂಸ ಉತ್ಪಾದನೆಯಾದ ಬಳಿಕ ನಗರದ ವಿವಿಧಡೆ ಮಾಂಸ ಸಾಗಣೆಗೊಳಿಸಲು ಹತ್ತಕ್ಕೂ ಅಧಿಕ ಕ್ರೂಸರ್ ವಾಹನಗಳು ಹಾಗೂ ಸಿಬ್ಬಂದಿಗೆ ಸೌಲಭ್ಯ ಕಲ್ಪಿಸಲಾಗುವುದು. ನಗರದ ಯಾವುದೇ ಪ್ರದೇಶದಲ್ಲಿ ಮಾಂಸ ಉತ್ಪಾದಿಸದೆ ಸ್ವಚ್ಛತೆ ಕಾಪಾಡುವುದು ಮೂಲ ಉದ್ದೇಶವಾಗಿದೆ. ಈಗಾಗಲೇ ಅರಬ್ ದೇಶದಲ್ಲಿ ತಂತ್ರಜ್ಞಾನಧಾರಿತ ಕಸಾಯಿಖಾನೆಯನ್ನು ಅಧಿಕಾರಿಗಳು ಪರಿಶೀಲಿಸಿದ್ದು ಅದರಂತೆ ನಿರ್ಮಿಸಲು ಯತ್ನಿಸಲಾಗುವುದು. ಜಿಲ್ಲೆಯಲ್ಲಿ ನಿರ್ಮಾಣಗೊಂಡರೆ ರಾಜ್ಯದ ಬೆಂಗಳೂರಿನಲ್ಲಿಯೇ ಬಿಟ್ಟರೆ ಅತ್ಯಂತ ವೈಜ್ಞಾನಿಕ ಆಧಾರಿತ ಎರಡನೇ ಕಸಾಯಿಖಾನೆ ಎಂಬ ಹೆಗ್ಗಳಿಕೆ ಜಿಲ್ಲೆಗೆ ಬರಲಿದೆ. ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಇದರ ಬಗ್ಗೆ ಗ್ರಾಮೀಣ ಶಾಸಕರು ಮಂತ್ರಿ ಜತೆ ಚರ್ಚಿಸಿದ್ದಾರೆ ಎಂಬುದಾಗಿ ಅಧಿಕಾರಿ ತಿಳಿಸಿದರು.
ವಿವಿಧಡೆ ಮಾಂಸ ಉತ್ಪಾದನೆ : ಇಲ್ಲಿನ ಬೆಂಗಳೂರು ರಸ್ತೆ ಹಾಗೂ ಕೌಲಬಜಾರ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಮಾಂಸ ಉತ್ಪಾದಿಸಲಾಗುತ್ತಿದೆ. ಆದರೆ, ಕಳೆದ ಮೂರು ವರ್ಷದ ಹಿಂದೆ ಬೆಂಗಳೂರು ರಸ್ತೆಯಲ್ಲಿನ ಮಾರುಕಟ್ಟೆಯ ದುರಸ್ತಿ ಕಾಮಗಾರಿ ನಡೆಯುತ್ತಿದ್ದು ಇನ್ನೂ ಪೂರ್ಣಗೊಂಡಿಲ್ಲ. ಆದ್ದರಿಂದ, ರಸ್ತೆಯಲ್ಲಿಯೇ ಮಾಂಸ ಉತ್ಪಾದನೆ ಹಾಗೂ ಮಾರಾಟ ಮಾಡಲಾಗುತ್ತಿದೆ. ಸುತ್ತಲೂ ವಾಣಿಜ್ಯ ಮಳಿಗೆಗಳು ಇರುವುದರಿಂದ ನಿತ್ಯವೂ ಜನಸಂಚಾರ ದಟ್ಟಣೆ ಕೂಡಿದ್ದು ಮಾಂಸದ ವಾಸನೆಯಿಂದ ಸಾರ್ವಜನಿಕರು ಹೈರಾಣಗಿದ್ದಾರೆ. ಕೌಲಬಜಾರ್ ಪ್ರದೇಶದ ಮಾರುಕಟ್ಟೆಯು ಈ ವ್ಯವಸ್ಥೆಯಿಂದ ಕೂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ ಸೂಕ್ತ ಸೌಕರ್ಯ ಕಲ್ಪಿಸಲಿ ಎಂಬುದು ಜನರ ಒತ್ತಾಯವಾಗಿದೆ.
ಕೋಟ್... ನಗರದ ಹೊರವಲಯದ ಹದಿನಾರು ಎಕರೆ ಪ್ರದೇಶದಲ್ಲಿ ಸುಸ್ಸಜ್ಜಿತ ಕಸಾಯಿಖಾನೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಂಗಳೂರು ನಂತರ ಬಳ್ಳಾರಿಯಲ್ಲಿಯೇ ಆಧುನಿಕ ತಂತ್ರಜ್ಞಾನ ಆಧಾರಿತ ಕಸಾಯಿಖಾನೆ ನಿರ್ಮಾಣವಾಗಲಿದೆ.
- ಬಿ.ನಾಗೇಂದ್ರ, ಶಾಸಕ, ಬಳ್ಳಾರಿ.