ಜಿಲ್ಲೆ

ಸಂವಿಧಾನ ಪ್ರತಿಯೊಬ್ಬರ ಪವಿತ್ರ ಗ್ರಂಥ

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಪ್ರತಿಯೊಬ್ಬ ನಾಗರಿಕರಿಗೆ ಪವಿತ್ರ ಗ್ರಂಥವಾಗಿದೆ ಎಂದು ಹಿರಿಯ ಸಾಹಿತಿ ಎನ್.ಡಿ.ವೆಂಕಮ್ಮ ಹೇಳಿದರು.

ಇಲ್ಲಿನ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮತ್ತು ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ ಬದುಕು ಮತ್ತು ಸಾಧನೆಗಳ ಪರಿಚಯ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ಸಾಮಾಜಿಕ ನ್ಯಾಯ ಒದಗಿಸಿಕೊಡುವ ರೀತಿಯಲ್ಲಿ ಸಂವಿಧಾನ ರಚಿಸಿದ್ದಾರೆ. ಅರ್ಥಪೂರ್ಣ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ನೀಡಿದ್ದಾರೆ ಎಂದರು.

ಮಹಿಳೆಯರಿಗೆ ಸಮಾನತೆ ಹಕ್ಕು, ಕಡ್ಡಾಯ ಶಿಕ್ಷಣ ಹಾಗೂ ಕಠಿಣ ಶ್ರಮದಿಂದಾಗಿ ಶೋಷಿತ ಸಮುದಾಯಗಳು, ರೈತರು, ಕಾರ್ಮಿಕರು ಇತರೆ ವರ್ಗದವರು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲರಾಗಲು ಶಕ್ತಿ ತುಂಬಿದ್ದಾರೆ. ಇಂದಿನ ಯುವಜನತೆಗೆ ಅಂಬೇಡ್ಕರ್ ಅವರು ಮಾದರಿಯಾಗಿದ್ದು, ಅವರು ನಡೆದ ದಾರಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದು ಕರೆ ನೀಡಿದರು.

ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷೆ ಎಂ.ಕಾತ್ಯಾಯಿನಿ ಮರಿದೇವಯ್ಯ ಮಾತನಾಡಿ, ಅಂಬೇಡ್ಕರ್ ಅವರ ವಿಚಾರ-ಧಾರೆಗಳನ್ನು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ಅವರ ಪುಸ್ತಕಗಳನ್ನು ಓದುವ ಮೂಲಕ ಪ್ರಜ್ಞಾವಂತರಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶ್ರೀಸತ್ಯಂ ಶಿಕ್ಷಣ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಅಲಂಭಾಷ ಮಾತನಾಡಿ, ಸಂವಿಧಾನದಿಅದ ಭಾರತವು ಸದೃಢ ರಾಷ್ಟವಾಗಿ ಹೊರಹೊಮ್ಮಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನನ್ನು ಹೇಗೆ ತರಬೇಕೆಂದು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ತಿಳಿಸಿಕೊಟ್ಟಿದ್ದಾರೆ ಎಂದರು. ಇದೇ ವೇಳೆ ಸಂವಿಧಾನದ ಪೀಠಿಕೆಯ ಪ್ರತಿಜ್ಞೆಯನ್ನು ಭೋದಿಸಲಾಯಿತು.

ಡಾ. ಬಿ.ಆರ್.ಅಂಬೇಡ್ಕರ್ ಅವರ ಬದುಕು ಮತ್ತು ಸಾಧನೆಗಳ ಪರಿಚಯ ಕುರಿತು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪುಸ್ತಕ ರೂಪದಲ್ಲಿ ಬಹುಮಾನ ವಿತರಿಸಲಾಯಿತು.