ಜಿಲ್ಲೆ

ಸಂವಿಧಾನ ಎಲ್ಲರಿಗೂ ಅನ್ವಯ

ಬಳ್ಳಾರಿ : ಬುದ್ಧ, ಬಸವ, ಅಂಬೇಡ್ಕರ್‌ರವರ ತತ್ವಗಳಿಂದ ಭಾರತದ ಸಂವಿಧಾನ ರಚಿತವಾಗಿದೆ. ಸಂವಿಧಾನವು ದೇಶದಲ್ಲಿರುವ ಎಲ್ಲ ವರ್ಗದವರಿಗೆ ಅನ್ವಯಿಸುತ್ತದೆ ಎಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರೊ.ಡಾ.ಅಪ್ಪಗೆರೆ ಸೋಮಶೇಖರ್ ಹೇಳಿದರು.

ಇಲ್ಲಿನ ವಿಎಸ್‌ಕೆ ವಿವಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬುದ್ಧ, ಬಸವ, ಅಂಬೇಡ್ಕರ್ ವಿಚಾರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆದರೆ, ಸಂವಿಧಾನಕ್ಕೆ ಅಪಚಾರ ನಡೆದಾಗ ಅದನ್ನು ಖಂಡಿಸುವುದು ದಲಿತರು ಮಾತ್ರ. ವ್ಯಕ್ತಿ ಮತ್ತು ಸಮುದಾಯ ಪ್ರಗತಿ ಹೊಂದಲು ನಮ್ಮಲ್ಲಿರುವ ಕೀಳರಿಮೆ ಮನಸ್ಥಿತಿಯಿಂದ ಹೊರಬರಬೇಕು. ಈ ಮೂರು ಮಹಾನ್ ವ್ಯಕ್ತಿಗಳ ಆಶಯಗಳು ಭಾರತದ ಸಂವಿಧಾನದ ರೂಪದಲ್ಲಿ ಮೂಡಿ ಬಂದಿವೆ. ಜಾತ್ಯಾತೀತ ಹಾಗೂ ಬಹುತ್ವ ಸಂಸ್ಕೃತಿಯ ಭಾರತದ ಬೆನ್ನೆಲುಬಾಗಿದೆ. ಆದರೆ, ಅದನ್ನೀಗ ಏಕರೂಪದ ಭಾರತವನ್ನಾಗಿ ಪರಿವರ್ತಿಸುವ ಹುನ್ನಾರ ದೇಶದಲ್ಲಿ ನಡೆಯುತ್ತಿದೆ ಕಳವಳ ವ್ಯಕ್ತಪಡಿಸಿದರು.

ಬೌದ್ಧ ಸಾಹಿತಿ ಆಯುಷ್ಮಾನ್ ಬುದ್ಧಘೋಷ್ ದೇವೇಂದ್ರ ಹೆಗ್ಗಡೆ ಮಾತನಾಡಿ, ಬುದ್ಧ ಕಾಲಾತೀತ ಪುರುಷ. ಎಲ್ಲ ಕಾಲಕ್ಕೂ ಸಾಗುವ ಬುದ್ಧನ ವಿಚಾರಗಳು ಅಂದಿನಿಂದ ಈವರೆಗೂ ಪ್ರಸ್ತುತವಾಗಿದೆ. ಬುದ್ಧನ ಪಂಚಶೀಲವು ಎಲ್ಲ ಜಾತಿ, ಧರ್ಮ, ಜನಾಂಗಕ್ಕೆ ಬೆಳಕನ್ನು ನೀಡುವುದಾಗಿದೆ. ಪ್ರತಿಯೊಂದು ಸಮಸ್ಯೆಗೂ ಬುದ್ಧನಲ್ಲಿ ಪರಿಹಾರವಿದೆ. ಇಂದಿನ ಯುವ ಪೀಳಿಗೆಗೆ ಬುದ್ಧನ ಪರಿಚಯ ಇಲ್ಲದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಾಹಿತಿ ಪ್ರೊ. ಅಮರೇಶ್ ನುಗಡೋಣಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳು ಮನುಷ್ಯ ಜೀವನಕ್ಕೆ ಅವಶ್ಯವಾದ ವಿಚಾರಗಳಾಗಿವೆ. ಬಸವಣ್ಣನ ಚಿಂತನೆಗಳನ್ನು ಸ್ವೀಕರಿಸಿದವರು ಕೆಳವರ್ಗದ ಜನಾಂಗದರು. ಕತ್ತಲೆಯಿಂದ ಬೆಳಕಿನಡೆಗೆ ಸಾಗಲು ಇವರ ವಿಚಾರಗಳು ಪ್ರೇರಣೆಯಾಗಿವೆ. ಬಸವಣ್ಣನವರ ವಚನಗಳು ಮತ್ತು ಅವರಲ್ಲಿದ್ದ ಜ್ಞಾನದ ಅರಿವು ಹೊಸತನದೆಡೆಗೆ ಸಾಗುವುದಾಗಿದೆ ಎಂದರು.

ಬಳಿಕ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ವಿವಿಯ ಕುಲಸಚಿವ ಎಸ್.ಎನ್. ರುದ್ರೇಶ್ ನೇತೃತ್ವದಲ್ಲಿ ಬುದ್ಧ, ಬಸವ, ಅಂಬೇಡ್ಕರ್‌ರವರ ಭಾವಚಿತ್ರವನ್ನೊಳಗೊಂಡ ತೆರೆದ ವಾಹನ ಹಾಗೂ ಅವರುಗಳ ವೇಷಭೂಷಣ ಧರಿಸಿದ್ದ ವಿದ್ಯಾರ್ಥಿಗಳನ್ನು ಒಳಗೊಂಡ ಮೆರವಣಿಗೆಯು ವಿವಿ ಆವರಣದಲ್ಲಿ ನಡೆಯಿತು.

ಕೋಟ್.. ವಿವಿ ಕುಲಪತಿ ಪ್ರೊ.ಎಂ. ಮುನಿರಾಜು ಮಾತನಾಡಿ, ಅನ್ಯಾಯಕ್ಕೆ ಒಳಗಾದ ಪ್ರತಿಯೊಂದು ಜಾತಿಗೆ ನ್ಯಾಯ ದೊರಕಿಸಿದವರು ಅಂಬೇಡ್ಕರ್‌ರವರು. ಅವರ ಚಿಂತನೆಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಕುಟುಂಬ, ಸಮಾಜ, ದೇಶಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು.

- ಪ್ರೊ.ಎಂ.ಮುನಿರಾಜು, ಕುಲಪತಿ, ವಿಎಸ್‌ಕೆ ವಿವಿ.