ಜಿಲ್ಲೆ

ಸಮೀಕ್ಷೆ ಕಾರ್ಯ ನಡೆಸಿ ಸೌಲಭ್ಯ ಒದಗಿಸಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಜಿಲ್ಲೆಯಲ್ಲಿನ ಲಿಂಗತ್ವ ಅಲ್ಪಸಂಖ್ಯಾತರ ಮತ್ತು ಮಾಜಿ ದೇವದಾಸಿ ಮಹಿಳೆಯರ ಅಸಹಾಯಕತೆಯನ್ನು ಹೋಗಲಾಡಿಸಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು ಎಂದು ಡಿಸಿ ಪ್ರಶಾಂತಕುಮಾರ ಮಿಶ್ರಾ ಹೇಳಿದರು.

ಇಲ್ಲಿನ ಡಿಸಿ ಕಚೇರಿಯಲ್ಲಿ ಬುಧವಾರ ನಡೆದ ಚೇತನಾ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಮಾಜಿ ದೇವದಾಸಿ ಪುನರ್ವಸತಿ ಯೋಜನೆಗಳ ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಮಟ್ಟದಲ್ಲಿ ಸಲಹಾ ಕೋಶವನ್ನು ರಚಿಸಬೇಕು. ಇದರ ಮುಖಾಂತರ ಜಿಲ್ಲೆಯಲ್ಲಿರುವ ತೃತೀಯ ಲಿಂಗಿಗಳನ್ನು ಗುರುತಿಸಿ, ಗುರುತಿನ ಚೀಟಿ ನೀಡುವುದು, ಸರ್ಕಾದ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜತೆಗೆ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಲಿಂಗತ್ವ ಅಲ್ಪಸಂಖ್ಯಾತರು ಶೋಷಣೆಯಿಂದ ಒಳಗಾದಲ್ಲಿ ಮತ್ತು ಯಾವುದೇ ಸೌಲಭ್ಯಗಳಿಂದ ವಂಚಿತರಾಗದಅತೆ ನೋಡಿಕೊಳ್ಳುವುದು ಎಲ್ಲ ಇಲಾಖೆಗಳ ಕರ್ತವ್ಯವಾಗಿರುತ್ತದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸ್ವಾವಲಂಬಿ ಜೀವನ ನಡೆಸಲು ಬ್ಯಾಂಕ್‌ಗಳಲ್ಲಿ ಸಾಲ-ಸೌಲಭ್ಯ ನೀಡಬೇಕು. 2 ಲಕ್ಷದವರೆಗೆ ಯಾವುದೇ ಶೂರಿಟಿ(ಜಾಮೀನು) ಇಲ್ಲದೇ ಲೋನ್ ವಿತರಣೆಗೆ ಅವಕಾಶವಿದ್ದು, ಈ ಕುರಿತು ಎಲ್ಲ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಬೇಕು ಎಂದು ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಒಟ್ಟು 1070 ಲಿಂಗತ್ವ ಅಲ್ಪಸಂಖ್ಯಾತರಿದ್ದು, ಚೇತನಾ ಯೋಜನೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಸಮಾಜದ ತುಳಿತಕ್ಕೆ ಹಾಗೂ ಶೋಷಣೆಗೆ ಒಳಗಾದ ಲಿಂಗತ್ವ ಅಲ್ಪಸಂಖ್ಯಾತರಿಗೆ ಅವರ ಜೀವನೋಪಾಯಕ್ಕಾಗಿ ಆದಾಯೋತ್ಪನ್ನಕರ ಚಟುವಟಿಕೆ ನಡೆಸಲು ಸರ್ಕಾರದಿಂದ 30 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಸಭೆಗೆ ತಿಳಿಸಿದರು. ಬಳ್ಳಾರಿ ಗ್ರಾಮೀಣ 58, ನಗರ 449, ಕುರುಗೋಡು 145, ಕಂಪ್ಲಿ 134, ಸಿರುಗುಪ್ಪ 167, ಸಂಡೂರಿನಲ್ಲಿ 117 ಲಿಂಗತ್ವ ಅಲ್ಪಸಂಖ್ಯಾತರು ಇದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 2007-08 ರ ಸಮೀಕ್ಷೆ ಪ್ರಕಾರ ಒಟ್ಟು 4288 ಮಾಜಿ ದೇವದಾಸಿ ಮಹಿಳೆಯರನ್ನು ಗುರುತಿಸಲಾಗಿದ್ದು, ಅದರಲ್ಲಿ ಒಟ್ಟು 4043 ಮಾಜಿ ದೇವದಾಸಿ ಮಹಿಳೆಯರು ಪ್ರತಿ ತಿಂಗಳು 2000 ರೂ. ನಂತೆ ಮಾಶಾಸನ ಪಡೆಯುತ್ತಿದ್ದಾರೆ. ಇನ್ನುಳಿದ 245 ಮಾಜಿ ದೇವದಾಸಿ ಮಹಿಳೆಯರು ಬಾಕಿ ಉಳಿದಿದ್ದಾರೆ ಎಂದು ಅಧಿಕಾರಿ ತಿಳಿಸಿದರು.