ಜಿಲ್ಲೆ

ವ್ಯವಸ್ಥಿತ ಸಮೀಕ್ಷಾ ಕಾರ್ಯ ಕೈಗೊಳ್ಳಿ

ಬಳ್ಳಾರಿ; ರಾಜ್ಯದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಮೀಕ್ಷೆ ಕಾರ್ಯವು ಮೇ 5 ರಿಂದ 23 ರ ವರೆಗೆ ಮೂರು ಹಂತಗಳಲ್ಲಿ ನಡೆಯಲಿದ್ದು, ಸಮೀಕ್ಷೆ ಕಾರ್ಯವನ್ನು ವ್ಯವಸ್ಥಿತವಾಗಿ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್ ನಿರ್ದೇಶಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ರಾಜ್ಯ ಮಟ್ಟದಲ್ಲಿ ತರಬೇತಿ ಪಡೆದ ಜಿಲ್ಲಾಮಟ್ಟದ ಮಾಸ್ಟರ್ ಟ್ರೈನರ್‌ಗಳಿಂದ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾಸ್ಟರ್ ಟ್ರೈನರ್ ಮತ್ತು ತಾಂತ್ರಿಕ ಅಧಿಕಾರಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ನ್ಯಾ.ಎಚ್.ಎನ್.ನಾಗಮೋಹನ ದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿದೆ. ಪರಿಶಿಷ್ಟ ಜಾತಿ ಜನಾಂಗದ ಕುಟುಂಬಗಳ ಸಮಗ್ರ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಕೈಗೊಳ್ಳಲು ಸರ್ಕಾರ ನಿರ್ದೇಶಿಸಿದ್ದು, ವ್ಯವಸ್ಥಿತವಾಗಿ ಯಾವುದೇ ಕುಟುಂಬ ಈ ಸಮೀಕ್ಷೆಯಿಂದ ವಂಚಿತರಾಗದಂತೆ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮೇ 09 ರಿಂದ 17 ರವರೆಗೆ ಸಮೀಕ್ಷೆ ದಾರರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆಯ ಉದ್ದೇಶ ಮನವರಿಕೆ ಮಾಡಿ ಮೊಬೈಲ್ ಆ್ಯಪ್‌ನಲ್ಲಿಯೇ ಮಾಹಿತಿಯನ್ನು ಬ್ಲಾಕ್ ಆಧಾರದಲ್ಲಿ ತಲಾ 300 ಮನೆಗಳ ಕುಟುಂಬಗಳ ಮಾಹಿತಿ ಸಂಗ್ರಹಿಸಬೇಕು. ನಂತರ ಮೇ 19 ರಿಂದ 21 ರವರೆಗೆ ಸಮೀಕ್ಷೆಯಲ್ಲಿ ಕೈಬಿಟ್ಟು ಹೋದ ಕುಟುಂಬಗಳನ್ನು ಗುರುತಿಸಿ ಮಾಹಿತಿ ಸಂಗ್ರಹಿಸಬೇಕು. ಇದರಲ್ಲಿಯೂ ಬಿಟ್ಟು ಹೋದ ಕುಟುಂಬಗಳಿದ್ದಲ್ಲಿ ಆನ್‌ಲೈನ್ ಮೂಲಕ ಸಂಬಂಧಪಟ್ಟ ಜನಾಂಗದವರು ತಾವಾಗಿಯೇ ಸಮೀಕ್ಷೆಯಡಿ ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಕಾರಣ ಸಮೀಕ್ಷೆದಾರರು ಮತ್ತು ಸಂಬಅಧಿಸಿದ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು.

ರಾಜ್ಯದಲ್ಲಿ ಗುರುತಿಸಿದ 101 ಪರಿಶಿಷ್ಟ ಜಾತಿಗಳ ಜನಗಣತಿ ನಡೆಯುತ್ತಿದ್ದು, ಇದರ ಅಂಗವಾಗಿ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಯಾವುದೇ ಲೋಪವಿವಿಲ್ಲದೆ ಪರಿಶಿಷ್ಟ ಜಾತಿ ಜನಾಂಗದ ಸಮೀಕ್ಷೆ ಕಾರ್ಯ ಕೈಗೊಳ್ಳುವಂತೆ ಎಂದರು.