ಜಿಲ್ಲೆ

ತ್ವರಿತವಾಗಿ ಬೆಳೆ ಸಮೀಕ್ಷೆ ಪೂರ್ಣಗೊಳಿಸಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ಜಿಲ್ಲಾದ್ಯಂತ ಪ್ರಸ್ತಕ ಸಾಲಿನ ಬೆಳೆ ಸಮೀಕ್ಷೆ ಆರಂಭಗೊಂಡಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬೆಳೆ ಕಟಾವು ಪ್ರಯೋಗಗಳ ಪ್ರಗತಿ ಪರಿಶೀಲನೆ, ಜನನ-ಮರಣ ನಾಗರಿಕ ನೋಂದಣಿ ಪದ್ಧತಿ, ಬೆಳೆ ಕ್ಷೇತ್ರ ಮರು ಹೊಂದಾಣಿಕೆ ಹಾಗೂ ಇತರೆ ವಿಷಯಗಳ ಕುರಿತಂತೆ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು. ಪ್ರಸ್ತುತ ಜಿಲ್ಲೆಯಲ್ಲಿ ಶೇ. 84 ರಷ್ಟು ಬಿತ್ತನೆಯಾಗಿದೆ. ಮುಂಗಾರು ಹಂಗಾಮಿನ ಬೆಳೆವಾರು ಸಮೀಕ್ಷೆ ಮಾಡಲು ಐದು ತಾಲೂಕುಗಳಿಗೆ ಕೃಷಿ, ತೋಟಗಾರಿಕೆ, ಕಂದಾಯ ಮತ್ತು ಆರ್‌ಡಿಪಿಆರ್ ಇಲಾಖೆಗಳಿಂದ 1760 ಜನ ಮೂಲ ಕಾರ್ಯಕರ್ತರನ್ನು ಹಂಚಿಕೆ ಮಾಡಲಾಗಿದೆ. ಈವರೆಗ 1704 ಪ್ರಯೋಗ ನಡೆದಿದ್ದು , ಇನ್ನೂ ಪ್ರಗತಿ ಸಾಧಿಸಬೇಕಿದೆ. ಸಮೀಕ್ಷೆಯು ಸರಿಯಾದ ಕ್ರಮದಲ್ಲಿ ನಡೆಯಬೇಕು ಹಾಗೂ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಸೂಚಿಸಿದರು.

ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ನಡೆಯುವ ಜನನ, ಮರಣಗಳನ್ನು ಕಡ್ಡಾಯವಾಗಿ 21 ದಿನಗಳ ನಿಗದಿತ ಅವಧಿಯೊಳಗೆ ನೋಂದಣಿ ಕಾರ್ಯ ಕೈಗೊಳ್ಳಬೇಕು. ವಿಳಂಬಕ್ಕೆ ಅವಕಾಶ ನೀಡದೆ ಹಾಗೂ ಮಧ್ಯವರ್ತಿಗಳ ಹಾವಳಿ ಇಲ್ಲದೇ ಸಕಾಲದಲ್ಲಿ ಸಾರ್ವಜನಿಕರಿಗೆ ಜನನ ಮರಣದ ನೋಂದಣಿ ಪ್ರಮಾಣ ಪತ್ರ ವಿತರಿಸಬೇಕು ಎಂದು ನಿರ್ದೇಶಿಸಿದರು.

ಮಹಾನಗರ ಪಾಲಿಕೆ ಮತ್ತು ನಗರ ಸ್ಥಳೀಯ-ಸಂಸ್ಥೆಗಳಲ್ಲಿ ಈವರೆಗೆ ಜನನ ಮತ್ತು ಮರಣ ನೋಂದಣಿಗೆ ಸಂಬಂಧಿಸಿದಂತೆ 3388 ಪ್ರಕರಣಗಳು ನೋಂದಣಿ ಬಾಕಿಯಿವೆ. ಈ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಂದಣಿಗೆ ವಿಳಂಬವಾಗುವುದರ ಬಗ್ಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವಂತೆ ಡಿಎಚ್‌ಒಗೆ ಸೂಚಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎನ್.ಕೆ.ಪತ್ರಿಬಸಪ್ಪ ಮಾತನಾಡಿ, 2025ರ ಜನವರಿಯಿಂದ ಜುಲೈ ವರೆಗೆ ಜಿಲ್ಲೆಯಲ್ಲಿ ಜನನ ನೋಂದಣಿ ಕುರಿತಂತೆ ಗಂಡು-8,817, ಹೆಣ್ಣು-8,281 ಸೇರಿ ಒಟ್ಟು 17,098 ನೋಂದಣಿಯಾಗಿವೆ. 2025 ರ ಜನವರಿಯಿಂದ ಜುಲೈ ವರೆಗೆ ಜಿಲ್ಲೆಯಲ್ಲಿ ಮರಣ ನೋಂದಣಿ ಕುರಿತಂತೆ ಗಂಡು-4,667, ಹೆಣ್ಣು-3,213 ಮತ್ತು ಲಿಂಗತ್ವ ಅಲ್ಪಸಂಖ್ಯಾತರು-3 ಸೇರಿದಂತೆ ಒಟ್ಟು 7,883 ನೋಂದಣಿಯಾಗಿವೆ ಎಂದು ಸಭೆಗೆ ಮಾಹಿತಿ ನೀಡಿದರು.