ಜಿಲ್ಲೆ

ನಿಧಾನಗತಿ ಕಾಮಗಾರಿಗೆ ಸವಾರರು ಹೈರಾಣ

ಬಳ್ಳಾರಿ : ಜಿಲ್ಲೆಯಿಂದ ಹಾದು ಹೋಗಿರುವ ಅಂಕೋಲಾ -ಗುತ್ತಿ ಹೆದ್ದಾರಿ -63 ಹಾಗೂ ಬೀದರ್‌ನಿಂದ ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 150ಎ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ನಿಧಾನಗತಿಯ ಕಾಮಗಾರಿಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ.

ಹೊಸಪೇಟೆ - ಬಳ್ಳಾರಿ ಮೂಲಕ ಹಾದುಹೋಗಿರುವ ಅಂಕೋಲಾ - ಗುತ್ತಿ ರಾಷ್ಟ್ರೀಯ ಹೆದ್ದಾರಿ - 63 ಚತುಷ್ಪಥ ಕಾಮಗಾರಿಯು ಕಳೆದ ಎಂಟು ವರ್ಷವಾದರೂ ಪೂರ್ಣಗೊಂಡಿಲ್ಲ. ಇದು ರಾಜ್ಯದ ಅರೇಳು ಜಿಲ್ಲೆ ಸೇರಿ ನೆರೆಯ ಆಂಧ್ರಪ್ರದೇಶದ ಮೂರ್ನಾಲ್ಕು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಿದ್ದು, ಅಮೆಗತಿಯಲ್ಲಿ ಸಾಗಿದೆ. 2017ರಲ್ಲಿ ಆರಂಭವಾಗಿರುವ ಕಾಮಗಾರಿಯೂ 2019ಕ್ಕೆ ಪೂರ್ಣಗೊಳ್ಳಬೇಕಿತ್ತು. 95.37 ಕಿ.ಮೀ. ರಸ್ತೆ ಕಾಮಗಾರಿಯನ್ನು ಆರಂಭದಲ್ಲಿ ಹೊಸದೊಂದು ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ನಂತರದಲ್ಲಿ ಇಂಡಿಯಾದ ಪ್ರಸಿದ್ದ ಕಂಪನಿ ಎನಿಸಿಕೊಂಡಿರುವ ಗ್ಯಾಮನ್ ಇಂಡಿಯಾಗೆ 900 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿತ್ತು. ಬಳಿಕ ಬರೋಬ್ಬರಿ ಆರು ವರ್ಷಗಳವರೆಗೆ ನಿಧಾನಗತಿ ಕಾಮಗಾರಿ ನಡೆಸಿತು. ಹೀಗಾಗಿ ಕಂಪನಿಯ ಟೆಂಡರ್ ರದ್ದುಗೊಳಿಸಲಾಯಿತು. ಸದ್ಯ ಎಸ್‌ಆರ್‌ಸಿ ಕಂಪನಿ 830 ಕೋಟಿ ರೂ. ವೆಚ್ಚದಲ್ಲಿ ಕಳೆದ ವರ್ಷ ಮೇ ನಲ್ಲಿ ಕಾಮಗಾರಿ ಆರಂಭಿಸಿದೆ. 72 ಕಿ.ಮೀ. ಪೂರ್ಣಗೊಂಡಿದ್ದು 22 ಕಿ.ಮೀ.ರಸ್ತೆ ರಸ್ತೆ ನಿರ್ಮಾಣ ಬಾಕಿಯಿದೆ. ಮಣ್ಣಿನ ಕೊರತೆ, ಭೂ ಸ್ವಾಧೀನ, ವರ್ಷದಿಂದ ವರ್ಷಕ್ಕೆ ಏರಿಕೆಯಾಗುವ ವೆಚ್ಚ ಸೇರಿ ಇತರ ತಾಂತ್ರಿಕ ಕಾರಣಗಳಿಂದಾಗಿ ಹೆದ್ದಾರಿ ಕಾಮಗಾರಿ ನನೆಗುದ್ದಿಗೆ ಬಿದ್ದಿದೆ.

ಅದರಂತೆ ಮತ್ತೊಂದು ಜಿಲ್ಲೆಯ ಸಿರಗುಪ್ಪ ಮೂಲಕ ಹಾದು ಹೋಗಿರುವ ಬೀದರ್‌ನಿಂದ ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ - 150 ಎ ಕಾಮಗಾರಿ ಅಮೆಗತಿಯಲ್ಲಿ ಸಾಗಿದೆ. ಕಳೆದ ನಾಲ್ಕೈದು ವರ್ಷದ ಹಿಂದೆ 73 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದ್ದರೂ ಈವರೆಗೆ ಪೂರ್ಣಗೊಂಡಿಲ್ಲ. ಈಚೆಗೆ ನಡು ರಸ್ತೆಯಲ್ಲಿ ನಿಂತಿದ್ದ ನೀರಿನಲ್ಲಿ ಭತ್ತ ನಾಟಿ ಮಾಡಿ ಸಂಘಟನಕಾರು ಪ್ರತಿಭಟಿಸಿದ್ದರು. ಇದರಿಂದ ವಾಹನ ಸವಾರರ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ.

ಜಿಲ್ಲೆಯ ಸಿರಗುಪ್ಪ ತಾಲೂಕಿನಿಂದ ಹಾದು ಹೋಗಿರುವ ರಾಷ್ಟ್ರೀಯ ಕಳೆದ ಕೆಲ ದಿನಗಳಿಂದ ಕಾಮಗಾರಿ ಕೊಂಚ ವೇಗ ಪಡೆದುಕೊಂಡಿದೆ. ಒಂದೇ ಬದಿಯಲ್ಲಿ ನಿತ್ಯ ನೂರಾರು ಭಾರಿ ಗಾತ್ರದ ವಾಹನಗಳ ಓಡಾಟದಿಂದಾಗಿ ದ್ವಿಚಕ್ರ ವಾಹನ ಸವಾರರು ಕೈಯಲ್ಲಿ ಪ್ರಾಣ ಹಿಡಿದುಕೊಂಡು ಸಂಚರಿಸುವಂತೆಯಾಗಿದೆ. ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ನಿಗದಿತ ಸಮಯಕ್ಕೆ ತೆರಳಲು ಸವಾರರು ಹಾಗೂ ಕಚೇರಿಗೆ ತೆರಳುವ ನೌಕರರು ಹರಸಾಹಸಪಡಬೇಕಿದೆ.

ಅಪಘಾತಗಳಿಗೆ ಸಾಕ್ಷಿ : ಅರೆಬರೆ ಕಾಮಗಾರಿಯಿಂದಾಗಿ ಹಲವು ಅಪಘಾತಗಳಿಗೆ ರಾಷ್ಟ್ರೀಯ ಹೆದ್ದಾರಿ ಸಾಕ್ಷಿಯಾಗಿದೆ. ಹಲವರ ಪ್ರಾಣಕ್ಕೆ ಸಂಚಕಾರ ತಂದಿದೆ. ಅಲ್ಲದೆ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ವಾಹನಗಳ ಸಂಚಾರ ದಟ್ಟಣೆಯಿಂದ ಕೂಡಿರುವ ಕಾರಣ ದ್ವಿಚಕ್ರ ಹಾಗೂ ವಾಹನ ಸವಾರರು ಸಂಚರಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಇದೇ ಮಾರ್ಗದಲ್ಲಿ ಬರುವ ಹಳ್ಳಿಗಳಿಗೆ ತೆರಳಲು ಸೇತುವೆ ನಿರ್ಮಿಸದ ಕಾರಣ ಜನರು ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಕೋಟ್... ಸಿರಗುಪ್ಪದಿಂದ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕೆಲ ತಿಂಗಳಲ್ಲೇ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ.

- ರಾಜಶೇಖರ ಹಿಟ್ನಾಳ್, ಸಂಸದ.