ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ ಗುರುವಾರ ಆಯೋಜಿಸಿದ್ದ ಕಾಲೇಜುಗಳ ಮಾನ್ಯತೆ ಮತ್ತು ಮೌಲ್ಯಮಾಪನ ಕುರಿತ ಒಂದು ದಿನದ ಕಾರ್ಯಾಗಾರವನ್ನು ಕುಲಪತಿ ಪ್ರೊ.ಸಿದ್ದು ಪಿ.ಅಲಗೂರು ಉದ್ಘಾಟಿಸಿದರು. 
ಜಿಲ್ಲೆ

ಕಾಲೇಜುಗಳ ಆಂತರಿಕ ಗುಣಮಟ್ಟ ಕಾಯ್ದುಕೊಳ್ಳಿ: ವಿಎಸ್‌ಕೆ ವಿವಿ ಕುಲಪತಿ ಪ್ರೊ.ಸಿದ್ದು ಅಲಗೂರ ಹೇಳಿಕೆ

ಬಳ್ಳಾರಿ: ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಸಿದ್ದು ಪಿ.ಅಲಗೂರು ಹೇಳಿದರು.

ನಗರದ ವಿಎಸ್‌ಕೆ ವಿವಿಯ ಡಾ.ಅಂಬೇಡ್ಕರ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾಲೇಜುಗಳ ಮಾನ್ಯತೆ ಮತ್ತು ಮೌಲ್ಯಮಾಪನ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಎನ್‌ಇಪಿ ಅನುಷ್ಠಾನಕ್ಕೆ ತರಬೇಕಾದರೆ ಕಾಲೇಜುಗಳ ಆಂತರಿಕ ಗುಣಮಟ್ಟ ಹೆಚ್ಚಬೇಕು. ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿನ ಸೌಲಭ್ಯ ನೋಡಿ ಪಾಲಕರು ಮಕ್ಕಳನ್ನು ದಾಖಲಿಸುತ್ತಿದ್ದಾರೆ. ಹೀಗಾಗಿ ಕಾಲೇಜುಗಳ ತಾಂತ್ರಿಕ ಮತ್ತು ಆಂತರಿಕ ಗುಣಮಟ್ಟ ಕಾಯ್ದುಕೊಳ್ಳುವ ಅಗತ್ಯವಿದೆ. ಉನ್ನತ ಶಿಕ್ಷಣ ಪರಿಷತ್‌ನ ಅಭಿಪ್ರಾಯದಂತೆ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಬಹುತೇಕ ಕಾಲೇಜುಗಳು ನ್ಯಾಕ್‌ಗೆ ಒಳಪಟ್ಟಿಲ್ಲ. ಇದರಿಂದ ಹೊರಗುಳಿದ ಎಲ್ಲ ಕಾಲೇಜುಗಳು ಮುಂದಿನ ವರ್ಷದೊಳಗೆ ನ್ಯಾಕ್‌ಗೆ ಒಳಪಡುವಂತಾಗಬೇಕು ಎಂದರು.

ನ್ಯಾಕ್ ಸಹಾಯಕ ಸಲಹೆಗಾರ ಡಾ.ಡಿ.ಕೆ.ಕಾಂಬಳೆ ಮತ್ತು ಬೆಂಗಳೂರಿನ ಬಿ.ಎಂ.ಎಸ್.ಇನ್‌ಸ್ಟಿಟ್ಯೂಟ್‌ನ ಡೀನ್ ಡಾ.ತಿಪ್ಪೇಸ್ವಾಮಿ ಮಾತನಾಡಿದರು. ಕಾರ್ಯಾಗಾರದಲ್ಲಿ ಐಕ್ಯೂಎಸಿ ನಿರ್ದೇಶಕ ಪ್ರೊ.ರಾಬರ್ಟ್ ಜೋಸ್, ಸಿಡಿಸಿ ನಿರ್ದೇಶಕ ಪ್ರೊ.ವೆಂಕಟಯ್ಯ, ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳ ಪ್ರಾಚಾರ್ಯರು ಹಾಜರಿದ್ದರು.