ಜಿಲ್ಲೆ

ಸಿಎಂ ಬದಲಾವಣೆ ಹೈಕಮಾಂಡ್ ನಿರ್ಧಾರ

ಎಸ್.ಎರ್ರಿಸ್ವಾಮಿ

ಬಳ್ಳಾರಿ, ರಾಜ್ಯದ ಪೂರ್ಣವಧಿಯ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯಲಿದ್ದಾರೆ ಎಂಬುದು ಹೈಕಮಾಂಡ್ ನಿರ್ಧಾರ ಎಂದು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಶಾಸಕರ ಸಣ್ಣಪುಟ್ಟ ಹೇಳಿಕೆಯಿಂದ ಸಿಎಂ ಬದಲಾವಣೆಯಾಗಲ್ಲ. ಸರ್ಕಾರ ಹಾಗೂ ಶಾಸಕರ ನಡುವೆ ಯಾವುದೇ ಅಸಮಾಧಾನವಿಲ್ಲ , ಸರ್ಕಾರ ಸುಭದ್ರವಾಗಿದೆ. ಮನೆಯ ಅಂದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರುವುದು ಸಾಮಾನ್ಯ, ಹೈಕಮಾಂಡ್ ಎಲ್ಲವೂ ಸರಿ ಮಾಡಲಿದೆ ಎಂದರು.

ಬಿಜೆಪಿಯಲ್ಲಿಯೇ ನಾಲ್ಕೈದು ಗುಂಪುಗಳಿದ್ದು , ಸಿಎಂ ಬದಲಾವಣೆ ಎಂಬುದಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಬಿಜೆಪಿಯಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿಲ್ಲ, ಜನಾಭಿಪ್ರಾಯದಿಂದ ಆಡಳಿತ ಚುಕ್ಕಾಣಿ ಹಿಡಿಯಲಾಗಿದೆ. ಕಾಂಗ್ರೆಸ್ ಇತಿಹಾಸ ಹೊಂದಿರುವ ಪಕ್ಷ ವಿರೋಧ ಪಕ್ಷದವರು ಆಡುವ ಮಾತು ಏಕೆ ಕೇಳಬೇಕು ಎಂದು ಪ್ರಶ್ನಿಸಿದರು.

ಶಾಸಕರ ಕೈಗೆ ಸಚಿವರು ಸಿಗುತ್ತಿಲ್ಲ ಎಂಬುದು ಕೆಲವರ ಆರೋಪವಾಗಿದೆ. ಹೈಕಮಾಂಡ್ ಸೂಚನೆಯಂತೆ ಎಲ್ಲ ಸಚಿವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ್ ಜು. 7ರಿಂದ ಉತ್ತರ ಕರ್ನಾಟಕದ ಶಾಸಕರ ಜತೆ ಚರ್ಚಿಸಲಿದ್ದಾರೆ. ಶಾಸಕ ಬಿ.ಆರ್. ಪಾಟೀಲ್ ಅವರ ಕೆಲ ಸಮಸ್ಯೆಗಳಿತ್ತು. ಈಗಾಗಲೇ ಸುರ್ಜೆವಾಲ್ ಅವರನ್ನು ಕರೆದು ಸಮಸ್ಯೆ ಆಲಿಸಿದ್ದಾರೆ. ಪಕ್ಷದ ಮೂವರು ಶಾಸಕರು ಸರ್ಕಾರದ ವಿರುದ್ಧ ಮಾತನಾಡಿದರೆ ಸರ್ಕಾರಕ್ಕೆ ಏನು ತೊಂದರೆಯಿಲ್ಲ. ಕೇವಲ ಮಾಧ್ಯಮಗಳ ಸೃಷ್ಠಿ ಎಂದರು. ಶಾಸಕ ನಾರಾಭರತರೆಡ್ಡಿ, ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ ಇದ್ದರು.

====